ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ನಕಲಿ ಆ್ಯಪ್‌ಗಳ ಕಾಟ ಅಧಿಕಗೊಂಡಿದೆ. ಸರ್ಕಾರದ ಅಧಿಕೃತ ಆ್ಯಪ್‌ಗಳು ಸಕಾಲಕ್ಕೆ ತೆರೆದುಕೊಳ್ಳುತ್ತಿಲ್ಲ. ಸೈಬರ್ ಅಪರಾಧಗಳು ಅಧಿಕ.ಗೊಂಡಿದೆ. ಸರ್ಕಾರ ಮಹಾಮೌನವಹಿಸಿದೆ.
ಕರ್ನಾಟಕ ರಾಜ್ಯ ಸರ್ಕಾರ ಚುನಾವಣೆಗೆ ಮುನ್ನ ಪ್ರಕಟಿಸಿದ ೫ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಮಸ್ಯೆ ಆಗಿಲ್ಲ. ಇದಕ್ಕೆ ಯಾವ ಆ್ಯಪ್ ಬಳಕೆ ಬೇಕಿಲ್ಲ. ನೇರವಾಗಿ ಬಸ್ ಹತ್ತುವುದು ಹಾಗೂ ಪ್ರಯಾಣ ಮಾಡುವುದಿತ್ತು. ಹೀಗಾಗಿ ಜನರಿಗೆ ಸಮಸ್ಯೆ ಆಗಲಿಲ್ಲ. ಲಕ್ಷಾಂತರ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಉಳಿದ ಉಚಿತ ಯೋಜನೆಗಳಿಗೆ ಜನ ಆ್ಯಪ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಗೃಹಜ್ಯೋತಿಗೆ ಅಂತರ್ಜಾಲದ ಮೂಲಕ ಹೆಸರು ನೋಂದಾಯಿಸಬೇಕು. ಸರದಿಯಲ್ಲಿ ನಿಂತು ಹೆಸರನ್ನು ಸೇರ್ಪಡೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಇದುವರೆಗೆ ೧.೧೩ ಕೋಟಿ ಗೂ ಹೆಚ್ಚು ಜನ ಹೆಸರನ್ನು ನೋಂದಾಯಿಸಿದ್ದಾರೆ. ಇವರ ಅರ್ಜಿಗಳ ಪರಿಶೀಲನೆ ನಡೆಯಬೇಕು. ಇನ್ನೂ ಅನೇಕರು ತಮ್ಮ ಹೆಸರನ್ನು ನೋಂದಾಯಿಸಲು ಪರದಾಡುತ್ತಿದ್ದಾರೆ. ವಿದ್ಯುತ್ ನಿಗಮಗಳು ಮೊದಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿದ್ದವು. ಈಗ ಅವುಗಳನ್ನು ಮುಚ್ಚಲಾಗಿದೆ. ಜನ ಕಂಪ್ಯೂಟರ್‌ನಲ್ಲಿ ಆ್ಯಪ್ ತೆರೆದು ಮಾಹಿತಿಯನ್ನು ಸೇರ್ಪಡೆ ಮಾಡಬೇಕು. ಹಲವು ಸಂದರ್ಭಗಳಲ್ಲಿ ಇಂಟರ್‌ನೆಟ್ ಸಂಪರ್ಕ ಸಮರ್ಪಕವಾಗಿ ಇರುವುದಿಲ್ಲ. ಲಕ್ಷಾಂತರ ಒಂದೇ ಬಾರಿ ಬಳಸುವುದರಿಂದ ಆ ಆ್ಯಪ್‌ಗಳ ಸಾಮರ್ಥ್ಯ ಕುಸಿದಿರುತ್ತದೆ. ಅದರಿಂದ ಮಧ್ಯದಲ್ಲಿ ಕೈಕೊಡುತ್ತದೆ. ಇದರ ಬಗ್ಗೆ ಯಾರಿಗೆ ದೂರಬೇಕು ಎಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದರೊಂದಿಗೆ ನಕಲಿ ಆ್ಯಪ್‌ಗಳು ತಲೆಎತ್ತಿದ್ದು ಜನರನ್ನು ಸುಲಿಗೆ ಮಾಡುತ್ತಿವೆ. ಈ ಕಂಪನಿಗಳು ನಡೆಸುತ್ತಿರುವ ವಂಚನೆಯನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಪೊಲೀಸರು ಸೈಬರ್ ಅಪರಾಧಗಳನ್ನು ತನಿಖೆ ನಡೆಸುವುದಾಗಿ ಪ್ರತ್ಯೇಕ ವಿಭಾಗ ತೆರೆದಿದ್ದಾರೆ. ಇಲ್ಲಿಗೆ ದೂರು ಕೊಡುವ ಕೆಲಸವನ್ನು ಸರ್ಕಾರಿ ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ನಕಲಿ ಆ್ಯಪ್‌ಗಳ ಹಿಂದೆ ಅವರ ಸಂಗಡಿಗರೇ ಇರುತ್ತಾರೆ. ಸರ್ಕಾರಿ ಇಲಾಖೆಗಳು ಅಧಿಕೃತ ಆ್ಯಪ್‌ಗಳ ಸಾಮರ್ಥ್ಯ ಹೆಚ್ಚಿಸುವ ಕೆಲಸ ಕೈಗೊಂಡಿಲ್ಲ. ಅಲ್ಲದೆ ಅಧಿಕೃತ ಆ್ಯಪ್‌ಗಳ ಸಂಖ್ಯೆ ಹೆಚ್ಚಿಸಬೇಕು. ಜನಸಂಖ್ಯೆ ಹೆಚ್ಚಿರುವುದರಿಂದ ಅಂತರ್ಜಾಲದ ವಿಸ್ತಾರವೂ ಅಧಿಕಗೊಳ್ಳಬೇಕು. ಇದನ್ನು ನುರಿತವರು ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಹಲವು ಪ್ರಗತಿಪರ ಹೆಜ್ಜೆಗಳನ್ನಿಟ್ಟಿದೆ. ಆದರೂ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಆ್ಯಪ್‌ಗಳಲ್ಲೂ ಹಲವು ಸಮಸ್ಯೆಗಳಿವೆ. ರಾಜ್ಯ ಸರ್ಕಾರ ಆ್ಯಪ್‌ಗಳ ಪ್ರಭಾವ ಅಧಿಕವಾಗಿರುವುದರಿಂದ ಎಚ್ಚರವಹಿಸುವುದು ಅಗತ್ಯ. ಕರ್ನಾಟಕ ಸರ್ಕಾರಕ್ಕೆ ಸೇರಿದ ೪೦ ಅಧಿಕೃತ ಆ್ಯಪ್‌ಗಳಿವೆ ಎಂದು ಅಂದಾಜು ಮಾಡಲಾಗಿದೆ. ನಕಲಿ ಆ್ಯಪ್‌ಗಳೂ ಪ್ರತಿ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳಿಂದ ಜನ ಮೋಸ ಹೋದರೆ ಅದಕ್ಕೆ ಯಾರು ಹೊಣೆ? ಸರ್ಕಾರ ಯಾವುದೇ ಹೊಸ ಯೋಜನೆ ರೂಪಿಸುವ ಮುನ್ನ ಅದಕ್ಕೆ ಬೇಕಾದ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಆ್ಯಪ್‌ಗಳಿರಲಿ ಅವುಗಳಲ್ಲಿರುವ ಮಾಹಿತಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಹಿಂದೆ ಇದೇ ಸಮಸ್ಯೆ ಆಧಾರ್ ಕಾರ್ಡ್‌ಗೂ ಬಂದಿತ್ತು. ಈಗ ಪ್ರತಿಯೊಂದು ಇಲಾಖೆ ಒಂದಕ್ಕಿಂತ ಹೆಚ್ಚು ಆ್ಯಪ್‌ಗಳನ್ನು ಹೊಂದಿವೆ. ಅವುಗಳ ಬಳಕೆ ಅನಿವಾರ್ಯವಾಗಿರುವ ಹಾಗೆ ಅದರಲ್ಲಿರುವ ಮಾಹಿತಿಯ ರಕ್ಷಣೆಯೂ ಅಗತ್ಯ.
ಕಂಪ್ಯೂಟರ್ ಮತ್ತು ಅಂತರ್ಜಾಲ ಬಂದ ಮೇಲೆ ಆಡಳಿತದಲ್ಲಿ ಪಾರದರ್ಶಕತೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಕೆಲಕಾಲ ಅದು ಪಾರದರ್ಶಕವಾಗಿತ್ತು. ಕಾಲಕ್ರಮೇಣ ಮಾಹಿತಿ ಕಳವು, ನಕಲಿ ಆ್ಯಪ್‌ಗಳ ಬಳಕೆ ಅಧಿಕಗೊಂಡಿತು. ಈಗ ಜನರಿಗೆ ಈ ಆ್ಯಪ್‌ಗಳ ದುರ್ಬಳಕೆಯಿಂದ ಪಾರಾಗುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ರಾಜಕಾರಣಿಗಳು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಡಿಜಿಟಲ್ ಮಾಧ್ಯಮದ ಮೂಲಕ ಹೆಚ್ಚು ಹಣಕಾಸಿನ ವ್ಯವಹಾರ ನಡೆಯಬೇಕೆಂದು ಆರ್‌ಬಿಐ ಬಯಸುತ್ತದೆ. ಆದರೆ ಜನರಿಗೆ ಆಗುವ ವಂಚನೆಯನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಸರ್ಕಾರ ಕರ್ತವ್ಯ. ಸರ್ಕಾರಿ ನೌಕರರಿಗೂ ಸೂಕ್ತ ತರಬೇತಿ ಅಗತ್ಯ.