ಖಂಡ್ರೆಯವರೇ ಹುಷಾರು, ಕಾಡುದಾರಿ ತಪ್ಪಿಸಿಯಾರು

0
20

ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ'. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಂದ ಮೂರು ಎಕರೆಗೂ ಅಧಿಕ ಜಾಗ ಸರ್ಕಾರ ವಾಪಸ್ ಪಡೆಯಲಿದೆ. ರಾಜ್ಯದ ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರ ಈ ಎರಡು ಹೇಳಿಕೆಗಳು ಈಗ ಸಹ್ಯಾದ್ರಿ ಹಬ್ಬಿರುವ ಜಿಲ್ಲೆಗಳಲ್ಲಿ ಆತಂಕ ಹಾಗೂ ಸಂಘರ್ಷಕ್ಕೆ ಕಾರಣವಾಗಿವೆ. ಅರಣ್ಯ, ಪರಿಸರ, ಅದರೊಂದಿಗೆ ಬೆಸೆದ ಜನಜೀವನ ಹಾಗೂ ವಿವಾದ ಹೊಸದೇನಲ್ಲ. ಪ್ರಗತಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಈ ಸಂಘರ್ಷ ಇಂದು ಆರಂಭವಾದದ್ದೂ ಅಲ್ಲ. ಹಾಗಾಗಿಯೇ ಈ ಕುರಿತ ಖಂಡ್ರೆಯವರ ಹೇಳಿಕೆ ವಿವಾದಕ್ಕೆ ಮತ್ತು ಟೀಕೆಗೆ ಕಾರಣವಾಗಿದೆ. ನಮ್ಮ ದೇಶದ ರಾಜಕಾರಣಿಗಳೇ ಹೀಗೆ. ಯಾವ ವಿಷಯವನ್ನು ಅರಿಯಬೇಕು, ಅರಿತದ್ದು ಸಮರ್ಪಕವಾಗಿದೆಯೇ? ಪರಿಣಾಮ ಏನಾದೀತು ಆಡಿದರೆ ಎನ್ನುವ ಪರಿಜ್ಞಾನವೂ ಇರುವುದಿಲ್ಲ. ಬೀದರ್‌ನ ಈಶ್ವರ ಖಂಡ್ರೆ ಪಶ್ಚಿಮ ಘಟ್ಟದ ಕುರಿತು ಮಾತನಾಡುವಾಗ ಈ ಜಾಣ್ಮೆ ಸಹಜವಾಗಿಯೇ ತೋರಲಿಕ್ಕಿಲ್ಲ. ಆದರೆ ಖಂಡ್ರೆ ಬಗ್ಗೆಬಣ್ಣಗೇಡಿ’ ಮಾತನಾಡಿ ಶಿವಮೊಗ್ಗದಲ್ಲಿ `ಅರೆಜ್ಞಾನ’ ಪಾಂಡಿತ್ಯ ಪ್ರದರ್ಶನವಾಯಿತಲ್ಲ ಮತ್ತೊಬ್ಬರಿಂದ !? ಇದೂ ಕುತ್ಸಿತ ಮತ್ತು ಸಮಯ ಸಾಧಕ ರಾಜಕಾರಣದ ಮತ್ತೊಂದು ಮುಖ ಅಷ್ಟೇ.
ಡಾ.ಕಸ್ತೂರಿ ರಂಗನ್ ವರದಿ ಜಾರಿಗೆ ಬದ್ಧ ಎಂದು ತಾವು ಹೇಳಿಲ್ಲ. ಈ ಸಂಬಂಧ ರಚಿಸಲಾದ ಸಂಜೀವಕುಮಾರ ನೇತೃತ್ವದ ವಿಮರ್ಶಾ ಪರಿಣಿತರ ಅಧ್ಯಯನ ವರದಿ ಬಂದ ಮೇಲೆ ಪರಿಶೀಲಿಸಲಾಗುವುದು ಎಂದು ಹೇಳಿದ್ದೇನೆ ಎನ್ನುವುದು ನಂತರ ಖಂಡ್ರೆಯವರ ಸ್ಪಷ್ಟನೆ. ಅಷ್ಟರಲ್ಲಾಗಲೇ ಮಲೆನಾಡು, ಕರಾವಳಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಖಂಡ್ರೆ ಪ್ರತಿಕೃತಿ ದಹನವಾಗಿತ್ತು. ಪ್ರತಿಭಟನೆಯ ಕಾವು ಜೋರಾಗಿತ್ತು.
ಇದು ಖಂಡ್ರೆ- ಖರ್ಗೆ ಚರ್ಮದ ಬಣ್ಣ ಟೀಕಿಸಿದ ಹಿಂದಿನ ಮಂತ್ರಿ ಆರಗ ಜ್ಞಾನೇಂದ್ರ ಅವರ ಅಪ್ರಬುದ್ಧ ಅರೆಜ್ಞಾನದಿಂದಾಗಿ ಮತ್ತೊಂದು ಮಗ್ಗಲಿಗೆ ಹೊರಳಿತೇ ವಿನಾ ಜನರ ಆತಂಕವೇನೂ ದೂರವಾಗಲಿಲ್ಲ.
ಸಚಿವರ ಮೈ ಬಣ್ಣದ ಬಗ್ಗೆ ಮಾತನಾಡುವ ಆರಗ ಜ್ಞಾನೇಂದ್ರ ಹಾಗೂ ಅಂತಹ ಬೇಜವಾಬ್ದಾರಿ ಪ್ರತಿನಿಧಿಗಳಿಂದ ಹಾಗೂ ಅವರ ಸರ್ಕಾರದಿಂದಲೇ ಪಶ್ಚಿಮ ಘಟ್ಟದ ತಪ್ಪಲಿನ ಜನರ ಸಮಸ್ಯೆ, ಅವರ ಭೂಮಿ ಹಕ್ಕಿನ ಬೇಡಿಕೆ ಯಥಾಸ್ಥಿತಿ ಮುಂದುವರಿದುಕೊಂಡು ಬಂದಿದೆ. ಮೂರು ದಶಕಗಳಿಂದ ಹಕ್ಕಿಗಾಗಿ ಹೋರಾಡುತ್ತಿರುವ ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ಕೊಡಲಾಗಲೀ ಆಗದವರಿಗೆ ಈಗೆಲ್ಲಿದೆ ಆ ಸಂಬಂಧ ಮಾತನಾಡಲು ನೈತಿಕತೆ?
ಅರಣ್ಯ ಪ್ರದೇಶದ ಕೃಷಿ ಯೋಗ್ಯ ಭೂಮಿಯನ್ನು ಪರಂಪರಾಗತವಾಗಿ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ೧೯೯೫- ೯೬ರಲ್ಲಿಯೇ ಪಿ.ವಿ.ನರಸಿಂಹರಾವ್ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆಯಿಂದ ಹೊರಗಿಟ್ಟು ಮಂಜೂರಿ ಮಾಡುವಂತೆ ಆದೇಶ ನೀಡಿದ್ದರೂ ಈವರೆಗೂ ಕಾಯಂ ಸಾಗುವಳಿ ಚೀಟಿ ನೀಡಲು ಆಗದಂಥವರು, ಹತ್ತು ವರ್ಷಗಳಿಂದ ತಮ್ಮದೇ ಸರ್ಕಾರವಿದ್ದರೂ ಶಾಶ್ವತ ಪರಿಹಾರ ಹಾಗೂ ಆತಂಕ ನಿವಾರಣೆಗೆ ಯತ್ನಿಸದವರು ಹೊಸ ಸರ್ಕಾರ ಬಂದು ಒಂದೂವರೆ ತಿಂಗಳಿಗೇ ಪ್ರತಿಭಟನೆಗೆ ಇಳಿಯುವುದು ಎಷ್ಟು ಕ್ರೂರತನ ಅಲ್ಲವೇ?
ಪಶ್ಚಿಮ ಘಟ್ಟದ ೧,೬೪,೨೮೦ ಚದರ ಕಿಮೀ ಪ್ರದೇಶದಲ್ಲಿ ೫೯,೯೪೦ ಚದರ ಕಿಮೀ ವಿಸ್ತೀರ್ಣ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ, ಅಲ್ಲಿ ಜನವಸತಿ, ಗಣಿಗಾರಿಕೆ, ಮರುಳುಗಾರಿಕೆ, ಪವನ ವಿದ್ಯುತ್, ಕೈಗಾರಿಕೆ ಎಲ್ಲವನ್ನೂ ನಿಷೇಧಿಸಿದೆ. ಹಾಗೂ, ೨೦ ಸಾವಿರ ಚದರ ಮೀಟರ್‌ಗಳಿಗಿಂತಲೂ ದೊಡ್ಡದಾದ ಕಟ್ಟಡ ನಿರ್ಮಿಸುವಂತಿಲ್ಲ. ರೈಲು ಮಾರ್ಗ, ರಸ್ತೆ, ಸರ್ಕಾರಿ ಯೋಜನೆಗಳು ಕೂಡ ನಿರ್ಬಂಧಿಸಿದೆ. ಕರ್ನಾಟಕದಲ್ಲಿಯ ೧೫೭೩ ಗ್ರಾಮಗಳನ್ನು ಸ್ಥಳಾಂತರಿಸಬೇಕಾದೀತೆಂದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿಯೇ ಇಡೀ ಪಶ್ಚಿಮ ಘಟ್ಟದ ವ್ಯಾಪ್ತಿಯ ಎಲ್ಲ ರಾಜ್ಯಗಳು ವಿರೋಧ ದಾಖಲಿಸಿವೆ. ಇದಕ್ಕೂ ಪೂರ್ವ ಡಾ.ಮಾಧವ ಗಾಡ್ಗೀಳ್ ವರದಿ ಶಿಫಾರಸು ಕೂಡ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು.
ನಿಜ. ಪರಿಸರ ಮತ್ತು ಅರಣ್ಯದ ನಡುವಿನ ನಿಕಟ ನಂಟನ್ನು ಯಾವ ತಜ್ಞರೂ ಒಪ್ಪಿಕೊಳ್ಳುತ್ತಿಲ್ಲ. ಸ್ಥಳೀಯರಿಂದಲೇ ಅರಣ್ಯ ನಾಶವಾಗುತ್ತಿದೆ ಎಂಬುದನ್ನು ಅಧಿಕಾರಿಗಳು ವ್ಯವಸ್ಥಿತವಾಗಿ ಬಿಂಬಿಸುತ್ತಿದ್ದಾರೆ.
ಅರಣ್ಯ ನಾಶದ ಮೂಲ ಕಾರಣ ದೇಶದ ಅರಣ್ಯ ನೀತಿ. ಮತ್ತು ಅರಣ್ಯವನ್ನು ಆಳುತ್ತೇನೆನ್ನುವ ಕೊಬ್ಬಿನ ಅಧಿಕಾರಿಗಳು ಹಾಗೂ ಏರ್ ಕಂಡೀಷನ್ ಮಹಲುಗಳಲ್ಲಿ ಕುಳಿತು ಅರಣ್ಯ, ಜೀವ ವೈವಿಧ್ಯ, ಜನರ ಬದುಕು, ಜನಜೀವನ ಅರಿಯದ, ಪ್ರಾಕೃತಿಕ ಲಕ್ಷಣದ ಮೂಲಸ್ತರ ತಿಳಿಯದ ಯೋಜಕರಿಂದ.
ಈವರೆಗೆ ಡಾ.ಮಾಧವ ಗಾಡ್ಗೀಳ್ ವರದಿ, ಆ ನಂತರ ಕಸ್ತೂರಿ ರಂಗನ್ ವರದಿ, ಮುಂದೆ ಈ ಸಂಬಂಧ ನಿಷ್ಕರ್ಶೆ ಮಾಡಲಿರುವ ಸಂಜೀವ ಕುಮಾರ ವರದಿ ಎಲ್ಲವೂ ಒಂದಿಲ್ಲೊಂದು ವಿವಾದಗಳೇ ಆಗಿ ದಶಕಗಳ ಕಾಲ ಮುಂದುವರಿಯಲಿವೆ ಅಷ್ಟೇ. ಹಾಗಂತ ಪಶ್ಚಿಮ ಘಟ್ಟದ ಮಂದಿಗೆ ನೆಮ್ಮದಿ ಇಲ್ಲ.
ಖಂಡ್ರೆ ಅರಣ್ಯ ಭೂಮಿ ಅತಿಕ್ರಮಣದಾರರಾದ ಕೃಷಿಕರಿಗೆ ಹೊಸ ಎಚ್ಚರಿಕೆಯನ್ನು ಈಗ ನೀಡಿದ್ದಾರೆ. ಅರಣ್ಯ ಭೂಮಿ ಅತಿಕ್ರಮಣ ಮಾಡಿ ಕೃಷಿ ನಡೆಸುತ್ತಿರುವ ಮಂದಿಗೆ ಮೂರು ಎಕರೆಗಿಂತಲೂ ಹೆಚ್ಚು ಸಾಗುವಳಿ ಮಾಡಿದ್ದರೆ ಅಂತಹ ಭೂಮಿಯನ್ನು ವಶಕ್ಕೆ ಪಡೆಯುವ ಬೆದರಿಕೆ ಹಾಕಿದ್ದಾರೆ. ಇದೂ ಹಾಗೇ. ಅಧಿಕಾರಿಗಳ ಅಸಂಗತ ಮಾಹಿತಿ.
ಹಿಂದೆ ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಕೃಷಿ ಯೋಗ್ಯ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಸರ್ಕಾರ ಪಶ್ಚಿಮ ಘಟ್ಟವೊಂದೇ ಅಲ್ಲ, ಎಲ್ಲ ಅರಣ್ಯಗಳ ಆಜೂ ಬಾಜೂ ವಾಸಿಸುವ ಅರಣ್ಯವಾಸಿಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಅವರ ಭೂಮಿ ಹಕ್ಕುಗಳ ಕುರಿತು ಹೋರಾಟಗಳು ನಡೆದವು. ೧೯೭೮ರ ಅರಣ್ಯ ಸಂರಕ್ಷಣಾ ಕಾಯ್ದೆ, ೧೯೮೦ರಲ್ಲಿ ಜಾರಿಯಾದಾಗ ಈ ಜನರ ಬದುಕು ಅಭದ್ರತೆಗೆ ನೂಕಿತು. ಆಗ ಆರಂಭವಾದ ಭೂಮಿ ಹಕ್ಕು ಪ್ರತಿಭಟನೆ ಒಂದು ಸ್ವರೂಪ ಪಡೆದದ್ದು ಪಿವಿಎನ್ ಪ್ರಧಾನಿಯಾಗಿದ್ದಾಗ. ೮೦ರ ಪೂರ್ವ ಸಾಗುವಳಿ ಮಾಡಿಕೊಂಡು ಅರ್ಜಿ ಸಲ್ಲಿಸಿದ್ದರೆ ಅವರಿಗೆಲ್ಲ ಭೂಮಿ ಹಕ್ಕು ನೀಡಬೇಕು ಎಂದು ಸರ್ಕಾರ ಆದೇಶಿಸಿತು.
ಸರಿಸುಮಾರು ಮೂವತ್ತು ವರ್ಷವಾಯಿತು. ಸರ್ಕಾರ- ಮಂತ್ರಿಗಳು ಬದಲಾದರು. ಡಬಲ್ ಎಂಜಿನ್- ತ್ರಿಬಲ್ ಎಂಜಿನ್ ಸರ್ಕಾರಗಳೂ ಬಂದವು. ಅಂತಹ ಅತಿಕ್ರಮಣದಾರರಿಂದ ಮಂಜೂರಾತಿಗಾಗಿ ಇಪ್ಪತೈದು ವರ್ಷಗಳ ಹಿಂದೆಯೇ ದಂಡ, ಪಾವತಿ, ಸರ್ವೇ ಎಲ್ಲವೂ ನಡೆದವು. ಇಷ್ಟಾಗಿಯೂ ಅವರ ಹೆಸರಿಗೆ ಈವರೆಗೂ ಭೂಮಿಯ ಹಕ್ಕಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ನನಗೆ ಅಧಿಕಾರ ಕೊಟ್ಟು ನೋಡಿ, ಒಂದು ತಿಂಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಸುತ್ತೇನೆಂದು ಗುಡುಗಿದ್ದರು. ಆಯ್ತು. ಅವರೂ ಮಂತ್ರಿಯಾದರು. ಆದರೆ ಕೆಂಪುಪಟ್ಟಿಯಿಂದ ಕಡತ ಹೊರಬೀಳಿಲ್ಲ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಲೋಕಸಭೆಗೆ ಈ ಸಂಬಂಧ ಕೇಳಿದ ಪ್ರಶ್ನೆಗೆ ಕರ್ನಾಟಕದಲ್ಲಿ ೨,೭೫,೪೪೬ ಅತಿಕ್ರಮಣ ಸಾಗುವಳಿದಾರರು ತಮಗೆ ಭೂಮಿ ಹಕ್ಕು ಕೊಡಿ ಎಂದು ಅರ್ಜಿ ಸಲ್ಲಿಸಿದ್ದರೆ, ೨೦೨೦ರ ಅಂತ್ಯಕ್ಕೆ ಕೇವಲ ೧೪,೬೬೭ ಜನರಿಗೆ ಮಾತ್ರ ಷರತ್ತುಬದ್ಧ ಪಟ್ಟಾ ವಿತರಿಸಲಾಗಿದೆ ಎಂಬ ಮಾಹಿತಿ ನೀಡಿತು. ಅವರಿಗೂ ಭೂಮಿಯ ಸಂಪೂರ್ಣ ಹಕ್ಕು ಸಾಮ್ಯವಿಲ್ಲ..! ಉತ್ತರದ ರಾಜ್ಯಗಳು ಮತ್ತು ನೆರೆಯ ತಮಿಳುನಾಡು, ಕೇರಳ, ಮಹಾರಾಷ್ಟç ಶೇ. ೭೫ಕ್ಕೂ ಹೆಚ್ಚು ಮಂದಿಗೆ ಪಟ್ಟ ನೀಡಿವೆ.
ಅರಣ್ಯ ಸಚಿವರ ಬಣ್ಣ ಟೀಕಿಸುವ ಅದೇ ಹಿಂದಿನ ಗೃಹ ಮಂತ್ರಿ ಅವರ ಸರ್ಕಾರದಲ್ಲಿ ಈ ಕಡತ ಸರಿದಾಡಲೇ ಇಲ್ಲ. ಬದಲು ನಾಲ್ಕನೇ ಸಾರೆ ಜಂಟಿ ಸಮೀಕ್ಷೆಗೆ ಆದೇಶಿಸಿ ಕಾಲಹರಣ ಮಾಡಿತ್ತು. ಚುನಾವಣೆ ಬಂದಾಗ ಮಾತ್ರ ಮೂಗಿಗೆ ತುಪ್ಪ ಸುರಿಯುತ್ತಾರೆ….
ಇನ್ನೊಂದು ದುರ್ದೈವ ಎಂದರೆ ಈ ರಾಜ್ಯದ ಅರಣ್ಯ ಮಂತ್ರಿಗಳಾಗಿದ್ದಾರಲ್ಲ, ಬಹುತೇಕ ಮಂದಿ ಅರಣ್ಯವನ್ನೇ ನೋಡಿರದವರು. ಅಥವಾ ಅರಣ್ಯದ ಸಮಸ್ಯೆ, ಜ್ಞಾನ, ಪ್ರಕೃತಿ, ಅಲ್ಲಿಯ ಜನರ ಬದುಕು ಬವಣೆ ಏನೂ ಅರಿಯದವರೇ ಆಗಿದ್ದಾರೆ. ದೇವರಾಜ ಅರಸು ಸ್ವತಃ ಅರಣ್ಯ ಪ್ರೇಮಿ. ಅರಣ್ಯ ಸಂರಕ್ಷಣೆ ಬಗ್ಗೆ ಒಂದಿಷ್ಟು ಕಾಳಜಿ ಕಳಕಳಿ ತೋರಿದವರು. ಈಗ ಬೆಂಗಳೂರಿನಲ್ಲಿ ಹಸಿರು ಮರಗಿಡಗಳು ಕಾಣುತ್ತವಲ್ಲ, ಅದಕ್ಕೆ ಮೂಲ ಕಾರಣ ಅರಸು.
ಅದೇ ಅವರ ಸರ್ಕಾರದಲ್ಲಿ ಗದುಗಿನ ಹುಲಿ ಕೆ.ಎಚ್.ಪಾಟೀಲರು ಅರಣ್ಯ ಮಂತ್ರಿಯಾಗಿದ್ದವರು. ಆಗಲೂ ಅಷ್ಟೇ. ಒಮ್ಮೆ ಅವರು ಅತಿಕ್ರಮಣ ಮಂಜೂರಿ ಇಲ್ಲ, ಒಕ್ಕಲೆಬ್ಬಿಸುತ್ತೇನೆ ಎಂದು ಗುಡುಗಿದಾಗ ಇಡೀ ಮಲೆನಾಡು ಪ್ರದೇಶವೇ ತಿರುಗಿ ನಿಂತಿತು. ಅವರ ಖಾತೆಯೂ ಬದಲಾವಣೆ ಆಯಿತು.
ಬಾಗಲಕೋಟೆಯ ಎಚ್.ವೈ.ಮೇಟಿಯವರು ಅರಣ್ಯ ಸಚಿವರಾಗಿದ್ದರು. ಅವರಿಗೆ ಅರಣ್ಯವೆಂದರೆ ಏನೆಂದೇ ಗೊತ್ತಿರಲಿಲ್ಲ. ಮಂತ್ರಿಯಾದ ತಕ್ಷಣ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರವಾಸಕ್ಕೆ ಬಂದರೆ ಅವರ ಭೇಟಿ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ಗಳಿಗೆ ಮಾತ್ರ. ನನಗೆ ಚಿತ್ರದಲ್ಲಿ ಹುಲಿ, ಕರಡಿ, ಮರಗಿಡ ನೋಡಿ ಗೊತ್ತೇ ವಿನಾ, ಈ ಬಗ್ಗೆ ತಿಳಿಯದು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಕೆ.ಎಚ್.ರಂಗನಾಥ ಅರಣ್ಯ ಮಂತ್ರಿಯಾಗಿ ಕಾಡಿರುವ ಪ್ರದೇಶಕ್ಕೆ ಬಂದಿದ್ದೇ ಕಡಿಮೆ. ಸಿ.ಪಿ.ಯೋಗೇಶ್ವರ, ಅರವಿಂದ ಲಿಂಬಾವಳಿ, ಉಮೇಶ ಕತ್ತಿ, ಬಿ.ಸಿ.ಪಾಟೀಲ, ರಮಾನಾಥ ರೈ, ಆರ್.ಶಂಕರ ಇವರೆಲ್ಲ ಅರಣ್ಯ ಮಂತ್ರಿಗಳಾದವರು.. ಯಾರೂ ಬೇಡದ ಖಾತೆ ನನಗೆ ಏಕೆ ಕೊಟ್ಟರೋ … ಎಂದು ಅಲವತ್ತು ಕೊಂಡರು. ಅರಣ್ಯಾಧಿಕಾರಿಗಳ ವರ್ಗಾವರ್ಗಿ, ಇಲ್ಲವೇ ಜಂಗಲ್ ಲಾಡ್ಜ್ಸ್, ಅರಣ್ಯ ಇಲಾಖೆ ಗೆಸ್ಟ್ ಹೌಸ್‌ಗಳಿಗೆ ತಮ್ಮ ಸಂಬಂಧಿಗಳ ಪ್ರವಾಸಕ್ಕೆ ಏರ್ಪಾಡು… ಇದು ಬಿಟ್ಟರೆ ಪ್ರತಿವರ್ಷದ ಮಳೆಗಾಲ ಪೂರ್ವ ಘೋಷಣೆ ಎಂದರೆ ಒಂದು ಕೋಟಿ ಗಿಡ ನೆಡುತ್ತೇವೆ, ಅರಣ್ಯಕ್ಕೆ ಬೇಲಿ ಹಾಕುತ್ತೇವೆ, ಇಂಥವುಗಳೇ !!
ಅರಣ್ಯ ಖಾತೆಯನ್ನು ಅತ್ಯಂತ ಸಮರ್ಥವಾಗಿ ಹಾಗೂ ಕಾಳಜಿಪೂರ್ವಕವಾಗಿ ನಿಭಾಯಿಸಿದವರು ಬಿ.ಎ.ಜೀವಿಜಯ. ಅರಣ್ಯ ಇಲಾಖೆಗೆ ಹೊಸ ಸ್ವರೂಪ ನೀಡಿ ಅರಣ್ಯ ಸಂರಕ್ಷಣಾ ಇಲಾಖೆಯನ್ನಾಗಿಸಿದರು. ಮರ ಕಡಿಯುವ ನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟರು. ಅರಣ್ಯ ಜನರ ಸಹಭಾಗಿತ್ವದಲ್ಲಿ ಉಳಿಯುತ್ತದೆಯೇ ವಿನಾ ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದು ಘೋಷಿಸಿದವರು. ಆ ನಂತರ ಬಂದ ಅರಣ್ಯ ಸಚಿವರುಗಳಿಗೆ ಯಾವ ದೂರದೃಷ್ಟಿಯೂ ಇರಲಿಲ್ಲ.
ಪಶ್ಚಿಮ ಘಟ್ಟದ ಜಿಲ್ಲೆಗಳ ಪ್ರತಿನಿಧಿಗಳು ಅರಣ್ಯ ಸಚಿವರಾಗಲು ಒಪ್ಪುತ್ತಿಲ್ಲ! ಈಗ ಖಂಡ್ರೆ ಬಣ್ಣ, ಧೋರಣೆ ಟೀಕಿಸುವ ಆರಗ ಜ್ಞಾನೇಂದ್ರ ತಮ್ಮ ಕ್ಷೇತ್ರದ ಜನರ ಸಾಗುವಳಿದಾರರ ಸಮಸ್ಯೆ ನಿವಾರಿಸಲು ಅರಣ್ಯ ಖಾತೆ ಕೇಳಬೇಕಿತ್ತು. ಅತಿ ಸುದೀರ್ಘಕಾಲ ರಾಜ್ಯದಲ್ಲಿ ಮಂತ್ರಿಯಾಗಿದ್ದ ಆರ್.ವಿ ದೇಶಪಾಂಡೆ, ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ ಯಾರಿಗೂ ಅರಣ್ಯ ಸಚಿವರಾಗುವುದು ಬೇಕಿರಲಿಲ್ಲ.. ಹಾಗಂತ ಎಲ್ಲರೂ ಅರಣ್ಯಾಧಿಕಾರಿಗಳನ್ನು ಆಡಿಸಿದವರೇ…! ರೈತ ಅತಿಕ್ರಮಣ ಅರಿವಿದ್ದ ಯಡಿಯೂರಪ್ಪ, ಸದಾನಂದಗೌಡರು ಮುಖ್ಯಮಂತ್ರಿಯಾದರೂ ಅವರನ್ನು ಬೆಂಬಲಿಸಿದ್ದ ಮತದಾರರ ಹಿತ ರಕ್ಷಿಸಿ ಸಾಗುವಳಿ ಪಟ್ಟಾ ನೀಡುವ ಇಚ್ಛಾಶಕ್ತಿ ತೋರಲಿಲ್ಲವೇಕೋ… ರಾಜ್ಯದ ಸಂಸದರಂತೂ ಸಂಬಂಧವಿಲ್ಲದ ಸ್ಥಿತಿಯಲ್ಲಿದ್ದಾರೆ..
ಇವರೆಲ್ಲ ಈಗ ಖಂಡ್ರೆ ವಿರುದ್ಧ ಹೋರಾಟಕ್ಕಿಳಿಯುತ್ತಾರೆ!
ಅರಣ್ಯ ಇಲಾಖೆಯ ದೊಡ್ಡ ದೋಷ ಎಂದರೆ ಅಧಿಕಾರಿಗಳಿಂದ ದಾರಿತಪ್ಪಿಸುವಿಕೆ. ಸಮಸ್ಯೆ ನೂರಾರು. ಯೋಜನೆಗಳೂ ಹಲವು. ಈಶ್ವರ ಖಂಡ್ರೆ ಕಲ್ಯಾಣ ಕರ್ನಾಟಕದ ಪ್ರಬುದ್ಧ ರಾಜಕಾರಣಿ. ಕಾಡಿನೊಳಗೆ ನುಗ್ಗಬೇಕು…ಹುಲಿ ಕರಡಿ ಆನೆಯನ್ನೂ ಪಳಗಿಸಬಹುದು. ನಗರದಲ್ಲಿರುವ ಅಧಿಕಾರಿಗಳಿಗೆ ಅರಣ್ಯ, ಆದಿವಾಸಿಗಳ, ತಪ್ಪಲಿಲ್ಲಿರುವ ಹುಲುಮಾನವರ ಬಳಿ ಕಳಿಸಬೇಕು.. ಖಂಡ್ರೆಯವರು ಖಡಕ್ ಆಗಲೇಬೆಕಿದೆ.

Previous articleದಾಟಬೇಕು ಸಂಸಾರ ನದಿ
Next article8 ವರ್ಷದ ಪೋರ: ಶಿವಮೊಗ್ಗ ಪೊಲೀಸ