ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಸಂಜೆ ಗೋಧೂಳಿ ಸಮಯಕ್ಕೆ ಅಜ್ಜನ ರಥೋತ್ಸವವು ಲಕ್ಷಾಂತರ ಭಕ್ತಗಣದ ನಡುವೆ ಸಾಗಿ ಬಂದಿತು. ಷಟಸ್ಥಲ ಧ್ವಜಾರೋಹಣ ಮಾಡಿ, ರಥೋತ್ಸವಕ್ಕೆ ಧಾರವಾಡದ ಹಿಂದೂಸ್ಥಾನಿ ಗಾಯಕ, ಪದ್ಮಶ್ರೀ ಪಂ. ಎಂ.ವೆಂಕಟೇಶಕುಮಾರ ಚಾಲನೆ ನೀಡಿದರು. ನಗರದ ಗವಿಮಠದ ಆವರಣದಲ್ಲಿ ವೈಜ್ಞಾನಿಕವಾಗಿ ಸಜ್ಜುಗೊಳಿಸಿದ್ದ ಶೃಂಗಾರಗೊಂಡ ರಥಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಬಳಿಕ ಸಾಗಿದ ರಥವು ಗಜ ಗಾಂಭೀರ್ಯದಿಂದ ಪಾದಗಟ್ಟಿ ಮುಟ್ಟಿ, ವಾಪಸ್ ಸುರಕ್ಷಿತವಾಗಿ ಮೂಲಸ್ಥಾನ ತಲುಪುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಮಹಾರಥೋತ್ಸವಕ್ಕೆ ಸಾಕ್ಷಿಯಾಗಿದ್ದರು.
ಗವಿಸಿದ್ಧೇಶ್ವರರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಬಾಜಾ-ಭಜಂತ್ರಿಯೊಂದಿಗೆ ಗವಿಮಠದ ಗರ್ಭಗುಡಿಯಿಂದ ತರಲಾಯಿತು. ರಥ ಸಾಗುತ್ತಿದ್ದಂತೆಯೇ `ಗವಿಸಿದ್ಧೇಶ್ವರ ಮಹಾರಾಜಕೀ…. ಜೈ’ ಎನ್ನುವ ಉದ್ಘೋಷಗಳನ್ನು ಭಕ್ತರು ಕೂಗಿದರು.
ನೂಕುನುಗ್ಗಲಿನಲ್ಲಿಯೇ ಭಕ್ತರು ರಥಕ್ಕೆ ಉತ್ತತ್ತಿ ಎಸೆದು, ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯ ದಯಪಾಲಿಸುವಂತೆ ಗವಿಸಿದ್ಧೇಶ್ವರರಲ್ಲಿ ಪ್ರಾರ್ಥಿಸಿದರು. ಉದ್ಘಾಟನೆಗೂ ಮುನ್ನ ಗವಿಶ್ರೀಗಳು ವೆಂಕಟೇಶಕುಮಾರ ಗುಣಗಾನ ಮಾಡಿದರು.
ಕಳೆದ ಬಾರಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ರಥೋತ್ಸವದಲ್ಲಿ ಭಾಗಿಯಾಗಿದ್ದರೆ, ಪ್ರಸಕ್ತ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಡಿಕೆಶಿ ಗವಿಸಿದ್ಧೇಶ್ವರರ ಉತ್ಸವ ಮೂರ್ತಿ ಇರುವ ಪಲ್ಲಕ್ಕಿ ಹೊತ್ತಿದ್ದರು. ಈ ಬಾರಿ ವಿಜಯೇಂದ್ರ ಪಲ್ಲಕ್ಕಿ ಹೊತ್ತು ಗಮನ ಸೆಳೆದರು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ರಥೋತ್ಸವಕ್ಕೆ ಚಾಲನೆ ನೀಡಿದ ಎಂ.ವೆಂಕಟೇಶಕುಮಾರರ ಜೀವನ, ಸಾಧನೆ ತಿಳಿಸಿದರು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸೊನ್ನದ ಶಿವಾನಂದ ಸ್ವಾಮೀಜಿ, ಬಾಲ್ಕಿಯ ಹಿರೇಮಠದ ಗುರುಬಸವ ಪಟ್ಟದೇವರ, ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನಸಭೆಯ ವಿಪಕ್ಷ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ, ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಎಂಎಲ್ಸಿಗಳಾದ ಹೇಮಲತಾ ನಾಯಕ, ಬಸವನಗೌಡ ಬಾದರ್ಲಿ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಿವರಾಮೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಬಸವರಾಜ ದಡೇಸಗೂರು, ಪರಣ್ಣ ಮುನವಳ್ಳಿ ಇದ್ದರು.
























