ಸಂಗೀತ ಸಾಮ್ರಾಟ ಸವಾಯಿ ಗಂಧರ್ವರು

0
12

ಪ್ರಕಾಶ ಜೋಶಿ
ಹಿಂದುಸ್ತಾನಿ ಸಂಗೀತ ಪ್ರಪಂಚದಲ್ಲಿ ಅನೇಕ ಗಂಧರ್ವರಿದ್ದಾರೆ. ಅವರಲ್ಲಿ ಕರ್ನಾಟಕಕ್ಕೆ ಸೇರಿದ ಪಂ. ಸವಾಯಿ ಗಂಧರ್ವರು ಹಾಗೂ ಪಂ. ಕುಮಾರ ಗಂಧರ್ವರೂ ಸೇರಿರುವುದು ಹೆಮ್ಮೆಯ ವಿಚಾರ.
ಸಂಗೀತ ಸಾಮ್ರಾಟ ಸವಾಯಿ ಗಂಧರ್ವರು ಧಾರವಾಡ ಜಿಲ್ಲೆಗೆ ಸೇರಿದ ಕುಂದಗೋಳದವರಾಗಿ ಸಂಗೀತ ಪ್ರಪಂಚಕ್ಕೆ ಅಭೂತ ಪೂರ್ವ ಕಾಣಿಕೆ ನೀಡಿದ್ದಾರೆ. ಹಿಂದೂಸ್ತಾನಿ ಸಂಗೀತ ಪ್ರಪಂಚವನ್ನು ಶ್ರೀಮಂತಗೊಳಿಸುವುದರ ಜೊತೆಗೆ ನಾಡಿಗೆ ತಮ್ಮ ಶಿಷ್ಯವೃಂದವನ್ನು ಧಾರೆ ಎರೆದಿದ್ದಾರೆ.
ಸವಾಯಿ ಗಂಧರ್ವರ ಮೂಲ ಹೆಸರು ರಾಮ ಭಾವು ಕುಂದಗೋಳಕರ. ಜನಿಸಿದ್ದು ಸಂಶಿ ಗ್ರಾಮದಲ್ಲಿ ೧೮೮೬ರ ಜನೆವರಿ ೧೯ ರಂದು. ತಂದೆಯ ಹೆಸರು ಗಣಪತರಾವ. ಇವರು ಕುಂದಗೋಳದ ಶ್ರೀಮಂತ ರಂಗನಗೌಡ್ರು ನಾಡಗೇರ ವತನದಾರರಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಗ ರಾಮರಾಯರನ್ನು ಪ್ರೌಢಶಿಕ್ಷಣಕ್ಕಾಗಿ ಹುಬ್ಬಳ್ಳಿಗೆ ಕಳುಹಿಸಿದರು. ಆದರೆ ಇವರ ಒಲವು ಸಂಗೀತದ ಕಡೆ ವಾಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಕುಂದಗೋಳ-ಜಮಖಂಡಿ ಸಂಸ್ಥಾನಕ್ಕೆ ಸೇರಿದ ಗ್ರಾಮ ಸಾಮಾನ್ಯವಾಗಿ ಕನ್ನಡದ ಜೊತೆ ಮರಾಠಿ ಸಹ ಬಳಕೆಯಲ್ಲಿತ್ತು. ಜೊತೆಗೆ ಮಹಾರಾಷ್ಟ್ರದ ಸಂಪರ್ಕವೂ ಇಲ್ಲಿನ ಜನರಿಗಿತ್ತು. ಇವರ ಸಂಗೀತಾಸಕ್ತಿಯನ್ನು ಕಂಡ ತಂದೆ ಆರಂಭದಲ್ಲಿ ಇವರನ್ನು ಗಾಯನ ಕಲಿಯಲು ಬಲವಂತರಾವ ಕೋಲ್ಹಟಕರ ಅವರಲ್ಲಿ ಸೇರಿಸಿದರು. ಬಾಲಕನಲ್ಲಿದ್ದ ಸಂಗೀತದ ಬಗೆಗಿನ ಆಸಕ್ತಿ ಕುರಿತು ಕೋಲ್ಹಟಕರ ತುಂಬಾ ಮೆಚ್ಚಿ ಅನೇಕ ರಾಗ-ರಾಗಿಣಿಗಳನ್ನು ಬೋಧಿಸಿದರು. ಆದರೆ ಕೋಲ್ಹಟಕರ ೧೮೯೪ರಲ್ಲಿ ಕೈಲಾಸವಾಸಿಗಳಾದರು.
ಶ್ರೀಮಂತ ನಾಡಗೇರ ಅವರಿಗೆ ಖ್ಯಾತ ಸಂಗೀತಗಾರರಾಗಿದ್ದ ಪಂ. ಅಬ್ಬುಲ್ ಕರಿಂಖಾನ್ ಸಾಹೇಬರ ಪರಿಚಯವಿತ್ತು. ಇದರಿಂದಾಗಿ ರಾಮಭಾವು ಅವರಿಗೆ ಖಾನ್ ಸಾಹೇಬರ್ ಶಿಷ್ಯತ್ಯ ಪ್ರಾಪ್ತವಾಯಿತು. ಸತತ ಸಾಧನೆಯ ಮೂಲಕ ಶಾಸ್ತಿçಯ ಸಂಗೀತ ಕರಗತ ಮಾಡಿಕೊಂಡು ಕಿರಾನಾ ಘರಾಣೆಯ ಸುಪ್ರಸಿದ್ಧ ಹಾಡುಗಾರರ ಸಾಲಿನಲ್ಲಿ ಗುರ್ತಿಸಿಕೊಂಡರು. ಠುಮರಿ, ಭಜನ ನಾಟ್ಯ ಗೀತೆಗಳ ಹಾಡುಗಾರಿಕೆಯಲ್ಲಿ ಸಹ ತಮ್ಮದೆ ಆದ ಛಾಪು ಮೂಡಿಸಿ ದೇಶದ ಸುವಿಖ್ಯಾತ ಗಾಯಕರಾಗಿ ಮೆರೆದರು. ಇವರ ಹಾಡುಗಾರಿಕೆಗೆ ದೇಶದ ಸಂಗೀತ ಪ್ರೇಮಿಗಳು ತಲೆದೂಗಿದರು.
ಮರಾಠಿ ನಾಟಕಗಳಲ್ಲೂ ಪಾತ್ರ ವಹಿಸಿದ್ದು ಗಮನಾರ್ಹ. ಅದರಲ್ಲೂ ಸ್ತ್ರೀಪಾತ್ರ ವಹಿಸುವ ಮೂಲಕ ಎಲ್ಲರ ಗಮನ ಸೆಳೆದರು. ಆ ಮೂಲಕ ಸವಾಯಿ ಗಂಧರ್ವ ಎಂಬ ಹೆಸರನ್ನು ಕಲಾಪ್ರೇಮಿಗಳ ಮೂಲಕ ಪಡೆದುಕೊಂಡು ಅದೇ ಹೆಸರಿನಿಂದ ಖ್ಯಾತರಾಗಿ ಸಂಗೀತಲೋಕವನ್ನೆ ಶ್ರೀಮಂತಗೊಳಿಸಿದರು.
ಸವಾಯಿ ಗಂಧರ್ವರು ಅನೇಕರಿಗೆ ಸಂಗೀತ ಬೋಧಿಸಿದರು. ಪಂ ಭೀಮಸೇನ ಜೋಶಿ, ಶ್ರೀಮತಿ ಡಾ. ಗಂಗೂಬಾಯಿ ಹಾನಗಲ್ಲ, ಪಂ. ಫಿರೋಜ್ ದಸ್ತೂರ, ಪಂ. ಬಸವರಾಜ ರಾಜಗುರು ಅವರಂತಹ ಅನೇಕ ಶಿಷ್ಯರನ್ನು ತಯಾರು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೇಶದ ಮೂಲೆ ಮೂಲೆಗಳಲ್ಲಿ ಗಾಯನ ಕಾರ್ಯಕ್ರಮ ನೀಡಿ ಕಿರಾನಾ ಘರಾಣೆಯ ರಸದೂಟವನ್ನು ಶೋತೃಗಳಿಗೆ ಉಣಬಡಿಸಿದರು. ಇಂತಹ ಅಭೂತ ಪೂರ್ವ ಕಲಾವಿದ ಸವಾಯಿ ಗಂಧರ್ವರು ೧೯೫೨ ಸಪ್ಪಂಬರ್ ತಿಂಗಳಿನಲ್ಲಿ ಸಂಗೀತ ಶಾರದೆಯ ಪಾದದಲ್ಲಿ ಲೀನವಾದರು.
ಇವರ ಸ್ಮರಣಾರ್ಥ ಅನೇಕ ವರ್ಷಗಳಿಂದ ಕುಂದಗೋಳದಲ್ಲಿ ಸಂಗೀತೋತ್ಸವ ಜರಗುತ್ತ ಬಂದಿರುವುದು ವಿಶೇಷ. ಸುಮಾರು ೨೦-೨೨ ವರ್ಷಗಳ ಕಾಲ ಇವರ ಶಿಷ್ಯ ಪರಪಂರೆಯಲಿದ್ದ ಶ್ರೀಮಂತ ನಾನಾಸಾಹೇಬ್ ನಾಡಗೇರ ಅವರು ಸ್ವಂತ ವೆಚ್ಚದಿಂದ ಸಂಗೀತ ಉತ್ಸವ ನಡೆಸಿಕೊಂಡು ಬಂದರು.
ನಂತರದ ಅವಧಿಯಲ್ಲಿ ಟ್ರಸ್ಟ್ ರಚಿತವಾಗಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಕರ್ನಾಟಕ ಸರಕಾರ ಸವಾಯಿ ಗಂಧರ್ವರ ಹೆಸರಿನಿಂದ ಸ್ಮಾರಕ ಭವನವನ್ನು ಕುಂದಗೋಳದಲ್ಲಿ ಕಟ್ಟಿದೆ. ಭಾರತೀಯ ಅಂಚೆ ಇಲಾಖೆ ಇವರ ಹೆಸರಿನಿಂದ ಅಂಚೆ ಚೀಟಿ ಬಿಡುಗಡೆಗೊಳಿಸಿದೆ.
ಇದೇ ಭವನದಲ್ಲಿ ದಿ. ೭ರಂದು ಅವಿಧವಾ ನವಮಿಯದಿನ ಸಂಗೀತೋತ್ಸವ ನಡೆಯುತ್ತಿದೆ. ನಾಡಿನ ಖ್ಯಾತ ಗಾಯಕ ಪಂ. ಪ್ರಭಾಕರ ಕಾರೇಕರ ಅವರನ್ನು ಈ ಕಾಲಕ್ಕೆ ಸನ್ಮಾನಿಸಲಾಗುತ್ತದೆ.

Previous articleಬರ ಅಧ್ಯಯನ ತಂಡದಿಂದ ಪರಿಶೀಲನೆ
Next articleಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರ್ಜರಿಯೊಂದೇ ದಾರಿ