ಕಲಬುರಗಿ: ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ ಬದ್ಧವಾಗಿದ್ದು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ ಹೇಳಿದರು.
ಆಳಂದ ಪಟ್ಟಣದಲ್ಲಿ ನಡೆದ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಅಂದಾಜು ಮೊತ್ತ ರೂ 800 ಲಕ್ಷ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂದಾಜು ಮೊತ್ತ ರೂ 625.95 ಲಕ್ಷ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನವರು 25 ನೂತನ ಪಾಲಿಟೆಕ್ನಿಕ್ ಕಾಲೇಜುಗಳನ್ನು ಘೋಷಿಸಿದ್ದರು.ಪರಿಣಾಮವಾಗಿ ಆಳಂದ್ ಪಟ್ಟಣದಲ್ಲಿ ಅಂದಾಜು 8 ಕೋಟಿ ವೆಚ್ಚದಲ್ಲಿ ನೂತನ ಕಾಲೇಜು ಮಂಜೂರಾಗಿದೆ. ಇದು ಈ ಭಾಗದ ಬಡ ಮದ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಾಸಕ ಬಿ.ಆರ್ ಪಾಟೀಲ್ ಅವರ ಅವಿರತ ಶ್ರಮ ಇದರ ಹಿಂದೆ ಇದೆ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಾನವ ಸಂಪನ್ಮೂಲ ನಮ್ಮ ದೇಶದ ಪ್ರಬಲ ಶಕ್ತಿಯಾಗಿದೆ. ನಮ್ಮ ಮಾನವ ಸಂಪನ್ಮೂಲಕ್ಕೆ ಇಡೀ ವಿಶ್ವದಲ್ಲೇ ಬೇಡಿಕೆ ಇದೆ. ಸಶಕ್ತ ರಾಷ್ಟ್ರ ನಿರ್ಮಾಣವಾಗಬೇಕಾದರೆ ಯುವಶಕ್ತಿಯನ್ನು ಬೆಳೆಸಬೇಕು. ಯುವಕರ ಸಂಖ್ಯಾಬಲಕ್ಕೆ ಸರಿಯಾದ ಶಿಕ್ಷಣ ನೀಡಿದಾಗ ಮಾತ್ರ ರಾಷ್ಟ್ರ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಆಣೆಕಟ್ಟಯ ಹಾಗೂ ರಸ್ತೆ ನಿರ್ಮಾಣದ ಜೊತೆಗೆ ಯುವಶಕ್ತಿಗೆ ವೈಜ್ಞಾನಿಕ ಶಿಕ್ಷಣ ನೀಡಿದಾಗ ಮಾತ್ರ ಸುಭದ್ರ ರಾಷ್ಟ್ರ ವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಾನು ಇತ್ತೀಚಿಗೆ ಅಮೆರಿಕಾಗೆ ಹೋದಾಗ ನಮ್ಮ ರಾಜ್ಯದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಲ್ಲಿ ವಿವರಿಸಿ ಹೇಳಬೇಕಿತ್ತು. ಅಲ್ಲಿನ ಕಂಪನಿಗಳ ಪ್ರಮುಖರು ಭಾರತದಲ್ಲಿ ಬಂಡವಾಳ ಹೂಡುವುದಕ್ಕೆ ಆಸಕ್ತಿ ತೋರಿಸಿದ್ದರು ಕಾರಣ ಇಲ್ಲಿನ ಮಾನವಸಂಪನ್ಮೂಲ. ಈ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಅವರು ಉತ್ಸುಕರಾಗಿದ್ದಾರೆ. ಇದಕ್ಕೆ ಗುಣಮಟ್ಟದ ಶಿಕ್ಷಣ ಕಾರಣವಾಗಿದೆ ಎಂದರು.
ಗುಣಮಟ್ಟದ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವನೆ ಸಮೃದ್ಧ ಮಾನವಸಂಪನ್ಮೂಲ ದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದ ಖರ್ಗೆ ಅವರು ಸಂವಿಧಾನದ ಅಡಿಯಲ್ಲಿ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲರೂ ಉತ್ತಮ ಶಿಕ್ಷಣದೊಂದಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ , ಸಮಾಜದ ಎಲ್ಲ ವರ್ಗದ ಜನರ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ ಇದು ಸಂತೋದಾಯಕ ಬೆಳವಣಿಗೆಯಾಗಿದೆ.
ಈ ಹಿಂದೆ ಇಲ್ಲಿ ಡಿಪ್ಲೋಮಾ ಹಾಗೂ ಡಿಗ್ರಿ ಕಾಲೇಜುಗಳಿರಲಿಲ್ಲ. ನಾನು ಒಂದು ಮಾದನಹಿಪ್ಪರಗಾ ಹಾಗೂ ಆಳಂದ ಪಟ್ಟಣಕ್ಕೆ ತಲಾ ಒಂದೊಂದು ಡಿಗ್ರಿ ಕಾಲೇಜು ಹಾಗೂ ಐಟಿಐ ಕಾಲೇಜು ಮಂಜೂರು ಮಾಡಿಸಿದೆ. ಆದರೆ ದುರ್ದೈವ ಸಂಗತಿ ಎಂದರೆ ಈ ಹಿಂದಿನ ಶಾಸಕರ ಕೊರಳಿ ಗ್ರಾಮದಲ್ಲಿ ಕಟ್ಟಿಸಿದ್ದಾರೆ ಇದು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ ಎನ್ನುವ ಅಭಿಪ್ರಾಯವಿದೆ. ಅಲ್ಲದೇ ಜ್ಯೂನಿಯರ್ ಕಾಲೇಜನ್ನು ರೂ 20 ಲಕ್ಷ ವೆಚ್ಚದಲ್ಲಿ ರಿಪೇರಿ ಮಾಡಿಸಿದೆ.
ಈ ವರ್ಷದಿಂದಲೇ ಪಾಲಿಟೆಕ್ನಿಕ್ ತರಗತಿಗಳು ಪ್ರಾರಂಭವಾಗಲಿ. ಕಾಲೇಜು ಮಂಜೂರಾಗಿದೆ. ಮುಂದಿನ 18 ತಿಂಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದ ಶಾಸಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸಿಗಬೇಕು. ಆಳಂದ ಪಟ್ಟಣ ಹಿಂದುಳಿದ ತಾಲೂಕು ಇದ್ದು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಇಲ್ಲಿ ಎಲ್ಲ ಜಾತಿ ಧರ್ಮದ ಜನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವರು ಸಮಾಜದ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಇರುತ್ತಾರೆ. ಇದರ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ಕ್ರಮ ಕೈಗೊಳ್ಳಲಿದ್ದಾರೆ.
ಸರ್ಕಾರದ ಯೋಜನೆಗೆ ಜಾಗದ ಕೊರತೆ ಎದುರಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮಾಡಿ ಕನಿಷ್ಠ 100 ಎಕರೆ ಜಾಗ ಗುರುತಿಸಬೇಕು ಎಂದು ಅವರು ಸಲಹೆ ನೀಡಿದರು. ಲ್ಯಾಂಡ್ ಆರ್ಮಿಗೆ ವಹಿಸಿರುವ ಯಾವ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಖರ್ಗೆ ಅವರಿಗೆ ಮನವಿ ಮಾಡಿ ಗ್ರಾಮೀಣ ಭಾಗದ ರಸ್ತೆಗಳು ಕೆಟ್ಟುಹೋಗಿವೆ, ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಗೆ ಒತ್ತು ನೀಡಲಿ ಎಂದರು.
ಆಳಂದ ಪಟ್ಟಣಕ್ಕೆ ಕುಡಿಯುವ ನೀರು, ಕಬ್ಬಿನ ಕಾರ್ಖಾನೆಗಳ ಬಳಕೆಗೆ ನೀರು ಒದಗಿಸಲು ರೂ 350 ಕೋಟಿ ವೆಚ್ಚದಲ್ಲಿ ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ತರುವ ಯೋಜನೆಗೆ ತಂದಿದ್ದೇನೆ. ಆದರೆ 18 ವೇದಿಕೆಯ ಮೇಲೆ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಮತ್ತಿತತರಿದ್ದರು.