ಏರ್ ಇಂಡಿಯಾದಲ್ಲೂ ವೈ-ಫೈ

0
26

ನವದೆಹಲಿ: ಏರ್ ಇಂಡಿಯಾ ಸಂಸ್ಥೆ ಈಗ ತನ್ನ ವಿಮಾನಗಳಲ್ಲಿ ವೈ-ಫೈ ಸೇವೆ ಕಲ್ಪಿಸುತ್ತಿದೆ. ಸೆ.೨ರಂದು ಲಂಡನ್‌ನಿಂದ ದೆಹಲಿಗೆ ತೆರಳಿದ ವಿಮಾನದಲ್ಲಿ ಈ ಸೇವೆ ಆರಂಭವಾಗಿದೆ. ಇಂಟರ್ನೆಟ್‌ನಿಂದ ಮಾಡಬಹುದಾದ ಎಲ್ಲಾ ಸೇವೆಗಳನ್ನು ಈಗ ವಿಮಾನದಲ್ಲಿ ವೈಫೈ ಮೂಲಕ ಮಾಡಬಹುದು. ಶೀಘ್ರದಲ್ಲೇ ಏರ್ ಇಂಡಿಯಾದ ಎಲ್ಲಾ ವಿಮಾನಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಈಗ ವಿಸ್ತಾರ ಏರ್‌ಲೈನ್ಸ್ ಮಾತ್ರ ತನ್ನ ಅಂತಾರಾಷ್ಟ್ರೀಯ ಮಟ್ಟದ ವಿಮಾನಗಳಲ್ಲಿ ವೈ-ಫೈ ಸೇವೆ ಒದಗಿಸುತ್ತಿರುವ ಮೊದಲ ವಿಮಾನಯಾನ ಸಂಸ್ಥೆ. ಆ ಸಾಲಿಗೆ ಈಗ ಏರ್ ಇಂಡಿಯಾ ಕೂಡಾ ಸೇರ್ಪಡೆಯಾಗಿದೆ.
ವಿಮಾನದಲ್ಲಿ ಈ ಸೌಲಭ್ಯ ಹೇಗೆ?
ವಿಮಾನಗಳಲ್ಲಿ ವೈ_ಫೈ ಸೌಲಭ್ಯ ಕಲ್ಪಿಸುವುದು ಕ್ಯಾಪ್ಟನ್ ವಿವೇಚನೆಗೊಳಪಡುವ ವಿಷಯ. ಸಾಮಾನ್ಯವಾಗಿ ವಿಮಾನ ಅತಿಎತ್ತರದಲ್ಲಿ ಹಾರಾಡುವಾಗ ವೈ-ಫೈ ಸೌಲಭ್ಯ ಕಲ್ಪಿಸಲಾಗುತ್ತದೆ. ವಿಮಾನ ಇಳಿಯುವಾಗ ಅಥವಾ ಹವಾಮಾನ ವೈಪರೀತ್ಯ ಇದ್ದಾಗ ಈ ಸೌಲಭ್ಯ ಸಿಗಲಾರದು.
ವಿಮಾನಗಳಲ್ಲಿ ವೈಫೈ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಕುತೂಹಲಕಾರಿ ಸಂಗತಿ. ಇದು ವಿಮಾನಯಾನ ಸಂಸ್ಥೆ ಹಾಗೂ ವಿಮಾನವಲ್ಲದೆ, ಏರ್ ಥ್ರೂ ಗ್ರೌಂಡ್, ಉಪಗ್ರಹ ಹಾಗೂ ವೈ-ಫೈಯನ್ನು ಅವಲಂಬಿಸಿದೆ. ಏರ್ ಥ್ರೂ ಗ್ರೌಂಡ್ ವಿಧಾನವು ಫೋನ್‌ನ ಇಂಟರ್ನೆಟ್ ಸಂಪರ್ಕದಂತೆ ಕಾರ್ಯನಿರ್ವಹಿಸುತ್ತದೆ. ಭೂಮಿ ಮೇಲಿನ ಸೆಲ್ ಟವರ್‌ನಿಂದ ಆಕಾಶದಲ್ಲಿ ಹಾರಾಡುವ ವಿಮಾನಗಳಿಗೆ ವೈ-ಫೈ ಸಂಕೇತ ರವಾನೆಯಾಗುತ್ತದೆ.
ಇನ್ನೊಂದು ವಿಧಾನ ಉಪಗ್ರಹ ಬಳಕೆ ಮಾಡುವಂತಹದ್ದು. ವಿಮಾನದ ಮೇಲೆ ಅಂಟೆನಾ ಅಳವಡಿಸಲಾಗುತ್ತದೆ. ಅದರ ಮೂಲಕ ಉಪಗ್ರಹಗಳಿಂದ ಸಂಕೇತಗಳನ್ನು ಸ್ವೀಕರಿಸುವ ಮೂಲಕ ಪ್ರಯಾಣಿಕರಿಗೆ ವೈ-ಫೈ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ತಂತ್ರಜ್ಞಾನ ಬಹಳ ಹೊಸದಾದರೂ ಹಲವಾರು ವಿಮಾನಯಾನ ಸಂಸ್ಥೆಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

ವೈ-ಫೈ ಸೇವೆ ಒದಗಿಸುವ ಅಂತಾರಾಷ್ಟ್ರೀಯ ವಿಮಾನಗಳು
ಎಮಿರೇಟ್ಸ್, ಅಮೆರಿಕನ್ ಏರ್‌ಲೈನ್ಸ್, ಡೆಲ್ಟಾ ಏರ್‌ಲೈನ್ಸ್, ಜೆಟ್‌ಬ್ಲೂ, ನಾರ್ವೆಯನ್ ಏರ್, ಫಿಲಿಫೈನ್ ಏರ್, ಏರ್ ನ್ಯೂ ನ್ಯೂಜಿಲ್ಯಾಂಡ್, ಚೀನಾ ಈಸ್ಟರ್ನ್ ಏರ್‌ಲೈನ್ಸ್, ಯುನೆಟೈಡ್ ಏರ್‌ಲೈನ್ಸ್ ಹಾಗೂ ವರ್ಜಿನ್ ಅಟ್ಲಾಂಟಿಕ್

Previous articleಭಾರತದಲ್ಲಿ ಶೇಖ್ ಹಸೀನಾ ಹೇಳಿಕೆಗೆ ಬಾಂಗ್ಲಾ ಆಕ್ಷೇಪ
Next articleಇವಿ ವಾಹನಗಳಿಗೆ ಇನ್ನು ಸಬ್ಸಿಡಿ ಅಗತ್ಯವಿಲ್ಲ