ಎಚ್‌ಎಸ್‌ಆರ್‌ಪಿ ಕಡ್ಡಾಯ ಆದೇಶ: ಸಾರ್ವಜನಿಕರಿಗೆ ಮಾಹಿತಿ ಕೊರತೆ

0
13

ಶಿವಕುಮಾರ ಹಳ್ಯಾಳ

ಹುಬ್ಬಳ್ಳಿ: ೨೦೧೯ರ ಏಪ್ರಿಲ್ ೧ಕ್ಕಿಂತ ಮೊದಲು ನೋಂದಾಯಿಸಲಾದ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಹೆಚ್ಚಿನ ಭದ್ರತಾ ನೋಂದಣಿ ನಂಬರ್ ಪ್ಲೇಟ್ (ಹೈ ಸೆಕ್ಯುರಿಟಿ ರಜಿಸ್ಟ್ರೇಷನ್ ಪ್ಲೇಟ್-ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವುದನ್ನು ರಾಜ್ಯ ಸಾರಿಗೆ ಇಲಾಖೆ ಕಡ್ಡಾಯಗೊಳಿಸಿ ಆದೇಶಿಸಿದೆ.
ರಾಜ್ಯದಲ್ಲಿನ ಸುಮಾರು ಎರಡು ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಸಬೇ ಕು ಎಂಬುದಾದರೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ೩.೧೦ ಲಕ್ಷ ಹಳೇ ದ್ವಿಚಕ್ರ, ನಾಲ್ಕು ಚಕ್ರವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಕೆಯಾಗಬೇಕಾಗಿದೆ.
ಸರ್ಕಾರವೇನೊ ಆದೇಶ ಮಾಡಿ ಬಿಟ್ಟಿತು. ಆದರೆ, ಈ ಕುರಿತ ಪ್ರಕ್ರಿಯೆ, ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ, ಈ ನಂಬರ್ ಪ್ಲೇಟ್ ಅಳವಡಿಕೆ ಹೇಗೆ ಮಾಡಬೇಕು. ಎಷ್ಟು ಹಣ ತುಂಬಬೇಕು? ಇಲಾಖೆ ಸೂಚಿಸಿದ ಸ್ಥಳ, ಕೇಂದ್ರಗಳಲ್ಲಿಯೇ ಇಂತಹ ನಂಬರ್ ಪ್ಲೇಟ್ ನೋಂದಣಿ ಮಾಡಲಾಗುತ್ತದೆಯೇ ಅಥವಾ ಹೊರಗಡೆಯೇ ಸಾರ್ವಜನಿಕರೇ ನಂಬರ್ ಪ್ಲೇಟ್ ಹಾಕಿಸಬೇಕೆ? ಹಾಗಿದ್ದರೆ ಎಲ್ಲಿ ಈ ತರಹದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಲಾಗುತ್ತದೆ? ಹೀಗೆ ಹತ್ತಾರು ಗೊಂದಲು ಸಾರ್ವಜನಿಕ ವಲಯದಲ್ಲಿದೆ.
ಎಚ್‌ಎಸ್‌ಆರ್‌ಪಿ ಎಂದರೇನು ಬಹುಪಾಲು ಜನರಿಗೆ ಮನವರಿಕೆ ಆಗಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ವಾಹನ ಮಾಲೀಕರಿಗೆ ಈ ವಿಷಯ ಗೊತ್ತೇ ಇಲ್ಲ ಎನ್ನಬಹುದು. ಅಷ್ಟೊಂದು ಮಾಹಿತಿ ಕೊರತೆ ಇದೆ.
ಸಾರಿಗೆ ಇಲಾಖೆಯೇ ಮುತುವರ್ಜಿ ವಹಿಸಿ ಈ ವಿಷಯದಲ್ಲಿ ಜಾಗೃತಿ ಅಭಿಯಾನ, ಕರಪತ್ರ, ಜಾಹೀರಾತು ಮೂಲಕ ಮಾಹಿತಿ ನೀಡಿ ಜಾಗೃತಿ ಒದಗಿಸುವ ಕೆಲಸ ಮಾಡಬೇಕಿತ್ತು. ಅದು ಇಲಾಖೆಯ ಹೊಣೆಯೂ ಕೂಡಾ. ಅದೇ ರೀತಿ ಪೊಲೀಸ್ ಇಲಾಖೆಯೂ ಕೂಡಾ ಜಾಗೃತಿ ಅಭಿಯಾನ ಮಾಡಿ ಜನರಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಎರಡೂ ಇಲಾಖೆಯವರೂ ಉಪೇಕ್ಷೆ ಮಾಡಿದ್ದಾರೆ. ಹೀಗಾಗಿ, ಜನರಲ್ಲಿ ಗೊಂದಲ ಆವರಿಸಿದೆ. ಮತ್ತೊಂದೆಡೆ ಈ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿಗೆ ನವೆಂಬರ್ ೧೭ ಕೊನೆಯ ದಿನವಾಗಿದೆ!
ಅಷ್ಟರೊಳಗೆ ಸಾರಿಗೆ ಮತ್ತು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಎಲ್ಲಿಲ್ಲಿ ನೋಂದಣಿ ಕೇಂದ್ರ ಇವೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕೆ? ಎಂಬುದರ ಕುರಿತು ಮಾಹಿತಿ ದೊರಕಿಸಬೇಕಾಗಿದೆ.
ಈ ರೀತಿ ಮಾಹಿತಿ ದೊರಕಿಸಿ ನೋಂದಣಿ ಮಾಡಿಸಲು ಜಾಗೃತಿ ಮೂಡಿಸದೇ ಕೊನೆ ದಿನಾಂಕ ಮುಗಿದ ಮೇಲೆ `ದಂಡ’ ಹಾಕಲು ಮುಂದಾದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆರ್‌ಟಿಓ ಮತ್ತು ಪೊಲೀಸ್ ಇಲಾಖೆಗೆ ಜನಹಿತಾಸಕ್ತಿಗಿಂತ ದಂಡಾಸ್ತ್ರ ಪ್ರಯೋಗಿಸುವುದರಲ್ಲಿಯೇ ವಿಶೇಷ ಆಸಕ್ತಿ ಎಂಬ ಟೀಕೆಗೆ ಗುರಿಯಾಗಬೇಕುತ್ತದೆ.

ಬೆರಳೆಣಿಕೆಯಷ್ಟು ಮಾಲಿಕರು ಬದಲಿಸಿದ್ದಾರೆ
ಆದರೂ, ಈವರೆಗೆ ಬೆರಳೆಣಿಕೆಯಷ್ಟು ವಾಹನ ಮಾಲಿಕರು ತಮ್ಮ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿದ್ದಾರೆ. ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ ಹುಬ್ಬಳ್ಳಿ-ಧಾರವಾಡದಲ್ಲಿ ೩.೧೦ ಲಕ್ಷ ಹಳೇ ವಾಹನಗಳಿಗೆ. ಅಂತಹ ದ್ವಿಚಕ್ರ ವಾಹನ, ನಾಲ್ಕು ಚಕ್ರದ ಲಘು ವಾಹನ ಹಾಗೂ ಬಾರಿ ವಾಹನ ಸೇರಿದಂತೆ ಎಲ್ಲ ವಾಹನಗಳಿಗೂ ನ. ೧೭ರೊಳಗಾಗಿ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ.
ವಾಹನಗಳ ಶೋ ರೂಮ್ ಮತ್ತು ಡೀಲರ್‌ಗಳಿಗೆ ನಂಬರ್ ಪ್ಲೇಟ್ ಬದಲಾವಣೆಗೆ ಸಾರಿಗೆ ಇಲಾಖೆ ಅವಕಾಶ ನೀಡಿದೆ. ಆದರೆ, ಅವರಿಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ವಾಹನ ಮಾಲಿಕರನ್ನು ವಿಚಾರಿಸಿದರೆ ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳಿ, ನಂಬರ್ ಪ್ಲೇಟ್ ಬಂದಾಗ ತಿಳಿಸುತ್ತೇವೆ ಎಂಬ ಮಾತುಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ನ. ೧೭ರೊಳಗಾಗಿ ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ವಾಹನ ಮಾಲೀಕರು ೫೦೦ ರಿಂದ ೧೦೦೦ ರೂ. ದಂಡ ಪಾವತಿಸುವುದು ಅನಿವಾರ್ಯ. ವಾಹನ ಮಾಲಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಿ ಇನ್ನಷ್ಟು ಸಮಯಾವಕಾಶ ನೀಡುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಕೋಡ್ ಇಲ್ಲದೇ ನೀಡುತ್ತಿರುವ ನಂಬರ್ ಪ್ಲೇಟ್…
ಸಾರಿಗೆ ಇಲಾಖೆ ಸೂಚಿಸುವ ೧೦ ಅಂಕಿಗಳ ವಿಶಿಷ್ಟ ಗುರುತಿನ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಶೋ ರೂಮ್ ಮತ್ತು ಡೀಲರ್‌ಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಗೆ ಇಲ್ಲದಂತಾಗಿದೆ. ನಂಬರ್ ಪ್ಲೇಟ್ ತಯಾರಕರು ಸಾರ್ವಜನಿಕರಲ್ಲಿ ಇರುವ ಮಾಹಿತಿ ಕೊರತೆಯನ್ನು ಬಂಡವಾಳ ಮಾಡಿಕೊಂಡು ಎಚ್‌ಎಸ್‌ಆರ್‌ಪಿ ಕೋಡ್ ಇಲ್ಲದ ನಂಬರ್ ಪ್ಲೇಟ್ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಎಲ್ಲಿ ಹೋಗಬೇಕು, ಯಾವ ರೀತಿ ನಂಬರ್ ಪ್ಲೇಟ್‌ನ್ನು ವಾಹನಕ್ಕೆ ಅಳವಡಿಸಿಕೊಳ್ಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ಇದನ್ನೇ ಕಾರಣವಾಗಿಟ್ಟುಕೊಂಡು ಕೆಲ ಅಂಗಡಿಕಾರರು ಎಚ್‌ಎಸ್‌ಆರ್‌ಪಿಯ ನಕಲಿ ನಂಬರ್ ಪ್ಲೇಟ್‌ಗಳನ್ನು ನೀಡಿ ಸಾರ್ವಜನಿಕರಿಂದ ಹೆಚ್ಚಿನ ಹಣ ಪೀಕುತ್ತಿದ್ದಾರೆ.

ನೋಂದಣಿ ಫಲಕ ಅಳವಡಿಸಿಕೊಳ್ಳುವುದು ಹೇಗೆ?…
ಸಾರ್ವಜನಿಕರು ತಮ್ಮ ಹಳೇ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳನ್ನು ಆನ್‌ಲೈನ್ ಮೂಲಕ ಅಳವಡಿಸಿಕೊಳ್ಳಲು https//transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಅಲ್ಲಿ ಬುಕ್ ಎಚ್‌ಎಸ್‌ಆರ್‌ಪಿ ಆಯ್ಕೆ ಮಾಡಿ, ವಾಹನದ ಮೂಲ ವಿವರಗಳನ್ನು, ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಭರ್ತಿ ಮಾಡಬೇಕು.
ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬಹುದಾಗಿದ್ದು, ಹಣದ ರೂಪದಲ್ಲಿ ಪಾವತಿಸುವಂತಿಲ್ಲ. ಹಣ ಪಾವತಿ ಮಾಡಿದ ಬಳಿಕ ವಾಹನ ಮಾಲೀಕರ ಸಂಖ್ಯೆಗೆ ಓಟಿಪಿ ಬರುತ್ತದೆ. ಆಗ ಎಚ್‌ಎಸ್‌ಆರ್‌ಪಿ ಅಳವಡಿಕೆ ದಿನಾಂಕ ಮತ್ತು ಸಮಯವನ್ನು ವಾಹನದ ಮಾಲೀಕರು ಮಾಡಿಕೊಳ್ಳಬಹುದು.

Previous article8 ಮಂದಿ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ
Next articleಶಾಖಾದ್ರಿ ಮನೆಯಲ್ಲಿ ಜಿಂಕೆ-ಚಿರತೆ ಚರ್ಮ ಪತ್ತೆ