ಉಪಚುನಾವಣೆ ಫಲಿತಾಂಶ ಬೀಗುವಂತಿಲ್ಲ, ದಿಕ್ಸೂಚಿ ಅಲ್ಲ

0
20

ರಾಜ್ಯದ ಮೂರೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವುದು ಸರ್ಕಾರದ ಭದ್ರತೆ ಮತ್ತು ಆಡಳಿತಾರೂಢ ಪಕ್ಷದ ಸಾಮರ್ಥ್ಯವನ್ನು ದೃಢಪಡಿಸಿರುವ ಸಂಗತಿಯಾಗಿದೆ. ಮತದಾರನ ಮುದ್ರೆಯೊಂದಿಗೆ ಸಹಜವಾಗಿ ಸಿದ್ದರಾಮಯ್ಯ ಸರ್ಕಾರದ ಆತ್ಮವಿಶ್ವಾಸ ಹೆಚ್ಚಿಸಿರುವ ವಿದ್ಯಮಾನವಿದು.
ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಜಕೀಯ ಪಕ್ಷಗಳು ಮತ್ತು ಅವಲೋಕರಿಗೆ ಹಲವು ಪಾಠಗಳನ್ನು ಕಲಿಸಿದೆ. ಎನ್‌ಡಿಎ ಅಭ್ಯರ್ಥಿಗಳ ಸೋಲು ವಂಶಪಾರಂಪರ‍್ಯ, ಕುಟುಂಬ ರಾಜಕಾರಣ ಹಾಗೂ ಧೋರಣೆ-ಅಹಂಕಾರಗಳ ಸಾರ್ವಜನಿಕ ಜೀವನವನ್ನು ಮತದಾರ ಸಹಿಸುವುದಿಲ್ಲ ಎಂಬುದನ್ನು ಎತ್ತಿ ತೋರಿಸಿದೆ. ಜೊತೆಗೆ ಭವಿಷ್ಯದ ರಾಜಕಾರಣಕ್ಕೆ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ.
ಚನ್ನಪಟ್ಟಣ ಮತ್ತು ಶಿಗ್ಗಾವಿಯಲ್ಲಿ ಎನ್‌ಡಿಎ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದವರು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು. ಹಾಲಿ ಸಂಸದರಾಗಿರುವ ಮಾಜಿ ಸಿಎಂಗಳು ಯಾವುದೇ ಒತ್ತಡವಿಲ್ಲದೇ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಂಡು ಬರುತ್ತೇವೆ; ತಾವು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಅಭಿವೃದ್ಧಿ ಕಡೆಗಣಿಸಿರುವ ಸರ್ಕಾರದ ನಡೆಯಿಂದಾಗಿ ಮಕ್ಕಳ ಗೆಲುವು ಹೂವಿನ ಹಾದಿಯಾಗಿದೆ ಎಂಬ ಭಾವನೆ ಹೊಂದಿದ್ದರೆಂಬುದು ಪ್ರಚಾರದ ವೇಳೆ ಎದ್ದು ಕಂಡಿತ್ತು.
ಇದಕ್ಕೆ ಪೂರಕವಾಗಿ ನಡೆದಿದೆ ಎಂದು ಆರೋಪಿಸುವ `ಕರಿಯ’, ವಕ್ಫ್, ಮುಡಾ, ವಾಲ್ಮೀಕಿ ಹಗರಣ, ಕ್ಷೇತ್ರ ಅಭಿವೃದ್ಧಿಗೆ ಅನುದಾನವೇ ದೊರೆಯದಿರುವುದು ಇವೆಲ್ಲ ಸೇರಿಕೊಂಡು, ಸರ್ಕಾರದ ವಿರೋಧಿ ಅಲೆ ಇದೆ ಎಂಬುದಾಗಿ ಎನ್‌ಡಿಎ ಆತ್ಮವಿಶ್ವಾಸದಲ್ಲಿ ಚುನಾವಣೆಗೆ ಧುಮುಕಿತ್ತು. ಆದರೆ ಎನ್‌ಡಿಎ ಪ್ರಧಾನ ಪಾಲುದಾರ ಪಕ್ಷವಾಗಿರುವ ಬಿಜೆಪಿಯಲ್ಲಿ ಒಳಜಗಳ ಮಿತಿ ಮೀರಿರುವುದು ಹಾಗೂ ತಾಳಮೇಳವಿಲ್ಲದ ರಾಜಕಾರಣ ಮಾಡುತ್ತ, ಸರ್ಕಾರವನ್ನು ಪ್ರತಿಬಂಧಿಸುವಲ್ಲಿ ಈ ಪಕ್ಷ ವಿಫಲವಾಗಿರುವುದನ್ನು ಮತದಾರ ಸೂಕ್ಷ್ಮವಾಗಿ ಗಮನಿಸಿದ್ದಾನೆ ಎನ್ನುವುದಕ್ಕೆ ಫಲಿತಾಂಶ ನಿದರ್ಶನ. ಸಂಡೂರಿನ ಕಾಂಗ್ರೆಸ್ ಸ್ಪರ್ಧಿ ಸಂಸದರ ಪತ್ನಿಯಾಗಿದ್ದರೂ, ಸ್ಥಳೀಯವಾಗಿ ಸರಳತೆ ಹಾಗೂ ಜನರ ಕಷ್ಟ ಕಾರ್ಪಣ್ಯಗಳೊಂದಿಗಿನ ಸ್ಪಂದನೆಯಿಂದಾಗಿ ಮತದಾರ ಆಶೀರ್ವಾದ ಮಾಡಿರುವುದು ನಿಸ್ಸಂಶಯ. ಇಲ್ಲಿಯೂ ಕೂಡ ಪ್ರಭಾವ-ಅಹಂಭಾವದ ಧೋರಣೆಗಳ ವಿರುದ್ಧ ಹಾಗೂ ಮತ್ತೆ ಗಣಿಗಾರಿಕೆ ಅನಿಷ್ಟದ ವಿರುದ್ಧ ಮತ ಚಲಾವಣೆಯಾಗಿರುವುದನ್ನು ಗುರುತಿಸಬಹುದು.
ಎನ್‌ಡಿಎ ಅಭ್ಯರ್ಥಿಗಳ ಸೋಲಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಮತ್ತು ನಾಯಕರ ಹೊಂದಾಣಿಕೆ ಕೊರತೆಗಳಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಜೆಡಿಎಸ್ ನಾಯಕರು ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿ ರಾಜಕೀಯ ಸಾಮರ್ಥ್ಯವನ್ನು ತೋರ್ಪಡಿಸಲಿಲ್ಲ. ಈ ನಿರಾಸಕ್ತಿ ಕಾರ್ಯಕರ್ತರ ಮೇಲೆ ಪ್ರತಿಫಲಿಸಿದ್ದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
ಕಾಂಗ್ರೆಸ್‌ಗೆ ಈ ಗೆಲುವು ತಕ್ಷಣಕ್ಕೆ ಬೇಕಿದ್ದ ಟಾನಿಕ್‌ನಂತಿತ್ತು. ಮೂರೂ ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೆ ತನ್ನ ಕುರ್ಚಿ ಭದ್ರ ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು. ಅಹಿಂದ ಮತಗಳು ಸ್ವಲ್ಪವೂ ಅತ್ತಿತ್ತ ಹೊರಳದೇ ಆಡಳಿತಾರೂಢ ಪಕ್ಷದ ಕಡೆಗೆ ಒಲಿದು ಬಂದಿದ್ದರಲ್ಲಿ ಈ ಮಾತಿನ ಪಾತ್ರವೆಷ್ಟು ಎಂಬುದನ್ನು ಮುಂದಿನ ದಿನಗಳ ರಾಜಕೀಯ ವಿದ್ಯಮಾನಗಳು ತೋರಿಸಲಿವೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜನನಾಯಕರು ಹಾಗೂ ಸಂಘಟನಾ ಚತುರರೂ ಎಂಬುದನ್ನು ಫಲಿತಾಂಶ ತೋರಿಸಿದೆ. ಇವರಿಬ್ಬರಿಗೆ ಸರಿಸಾಟಿಯಾಗಿ ಪ್ರತಿಪಕ್ಷದಲ್ಲಿ ನಾಯಕತ್ವವಿರಲಿಲ್ಲ ಎನ್ನುವುದನ್ನು ಕೂಡ ವಿಷದೀಕರಿಸಿದೆ. ಅಹಿಂದ ಕಾರ್ಡನ್ನು ಸಮರ್ಥವಾಗಿ ಬಳಸಿಕೊಂಡು ಕಾಂಗ್ರೆಸ್ ಯಶಸ್ವಿಯಾಗಿದೆ.
ಹಾಗೆಂದು ಸಿದ್ದರಾಮಯ್ಯ ಸರ್ಕಾರ ಬೀಗಬೇಕಾದ ಸಂದರ್ಭ ಇದಲ್ಲ. ಜೊತೆಗೆ, ತಮ್ಮ ಸರ್ಕಾರದ ಮೇಲೆ ಬಂದ ಹಗರಣಗಳ ಆರೋಪಗಳು ಮತ್ತು ವಿವಾದಗಳಿಗೆ ಫಲಿತಾಂಶದಿಂದ ಮುಕ್ತಿ ದೊರಕಿದೆ ಎಂಬ ಭಾವನೆಯೂ ಸಲ್ಲ. ಹಗರಣಗಳು ಮತ್ತು ವಿವಾದಗಳು ಜನರಲ್ಲಿ ಅಪನಂಬಿಕೆ ಮೂಡಿಸಿರುವುದನ್ನು ಅಲ್ಲಗಳೆಯಲಾಗದು. ಅಲ್ಲದೇ, ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಎಂದಿರುವ ಕೆಪಿಸಿಸಿ ಅಧ್ಯಕ್ಷರ ಮಾತೂ ಸರಿಯಲ್ಲ. ಮುಂದಿನ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಈಗ ರಾಜ್ಯ ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ತನ್ನ ಮೊದಲಿನ ವೈಭವಕ್ಕೆ ಮರಳುವಂತೆ ಮಾಡುವ ಸವಾಲು ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೆಲುವನ್ನು ಸಂಭ್ರಮಿಸಿ ರಾಜ್ಯದ ಜನರ ಭರವಸೆಯನ್ನು ಈಡೇರಿಸುವಂತಾಗಬೇಕಿದೆ.

Previous articleಅಜ್ಜ-ಅಜ್ಜಿ ಕೊಲೆ ಆರೋಪಿ ಬಂಧನ
Next articleಅನಾವರಣಗೊಳ್ಳಲಿದೆ ಸಾಂಸ್ಕೃತಿಕ ಸೊಬಗು…