ಉಧೋ ಎಂದ ಗಡಿಭಾಗದ ಜನತೆ: ಪೊಲೀಸರ ಕಾರ್ಯಕ್ಕೆ ಮಹಾ ಅಧಿಕಾರಿಗಳಿಂದ ಧನ್ಯವಾದ

0
21

ಬೆಳಗಾವಿ: ಗಡಿ ವಿವಾದದ ಹಿನ್ನೆಲೆ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉಭಯ ರಾಜ್ಯಗಳ ಮಧ್ಯೆ ಎರಡನೇ ದಿನವೂ ಬಸ್ ಸಂಚಾರ ಸ್ಥಗಿತವಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ 145 ಬಸ್​​ಗಳಲ್ಲಿ ಆಗಮಿಸಿದ್ದ ಭಕ್ತರು ಬೆಳಗಾವಿ ಪೊಲೀಸರ ಭದ್ರತೆಯಲ್ಲಿ ಸುರಕ್ಷಿತವಾಗಿ ವಾಪಸ್ ತೆರಳಿದ್ದಾರೆ. ಹೊಸ್ತಿಲ ಹುಣ್ಣಿಮೆ ಜಾತ್ರೆಗೆ ಅಂಗವಾಗಿ ಸವದತ್ತಿಗೆ ಕೊಲ್ಲಾಪುರದಿಂದ 145 ಎಂಎಸ್​ಆರ್​ಟಿಸಿ ಬಸ್​ಗಳಲ್ಲಿ ಭಕ್ತರು ಆಗಮಿಸಿದ್ದರು. ಈ ಮಧ್ಯೆ ಗಡಿ ವಿವಾದದಿಂದಾಗ ಉಭಯ ರಾಜ್ಯಗಳ ಗಡಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಬೆಳಗಾವಿ ಪೊಲೀಸರು, ಸವದತ್ತಿಯಲ್ಲಿ ಎಲ್ಲ ಬಸ್‌ಗಳನ್ನು ಒಂದೆಡೆ ಪಾರ್ಕ್ ಮಾಡಿಸಿ ಭದ್ರತೆ ನೀಡಿದ್ದರು. ಜೊತೆಗೆ ಯಾವುದೇ ತೊಂದರೆ ಇಲ್ಲದೇ ಮಹಾರಾಷ್ಟ್ರ ಭಕ್ತರನ್ನು ಸುರಕ್ಷಿತವಾಗಿ ವಾಪಸ್ ಕಳಿಸಿದ್ದಾರೆ. ಬೆಳಗಾವಿ ಪೊಲೀಸರ ಕಾರ್ಯಕ್ಕೆ ಮಹಾರಾಷ್ಟ್ರದ ಕೊಲ್ಲಾಪುರ ವಿಭಾಗದ ಎಂಎಸ್‌ಆರ್‌ಟಿಸಿ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.

ಸಂಚಾರ ಎರಡನೇ ದಿನವೂ ಸ್ಥಗಿತ: ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದಕ್ಕೆ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದು ಕೂಡ ಮುಂದುವರಿದಿದೆ. ಮಹಾರಾಷ್ಟ್ರದ 9 ಕಡೆ ಕರ್ನಾಟಕ ಬಸ್​ಗಳಿಗೆ ಶಿವಸೇನೆ, ಎಂಇಎಸ್ ಪುಂಡರು ಮಸಿ ಬಳಿದು ಉದ್ಧಟತನ ತೋರಿದ್ದರು. ಹೀಗಾಗಿ ಎರಡು ರಾಜ್ಯಗಳ ಮಧ್ಯೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ನಿತ್ಯ 400 ಬಸ್‌ಗಳು ಸಂಚರಿಸುತ್ತವೆ. ಸದ್ಯ ಬಸ್ ಸಂಚಾರ ಸ್ಥಗಿತವಾಗಿದ್ದಕ್ಕೆ ಜನರು ಪರದಾಡುತ್ತಿದ್ದಾರೆ. ಜೊತೆಗೆ ಸಾರಿಗೆ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ.

Previous article2023ಕ್ಕೆ ಗೌರಿ ಮೂಲಕ ಹೊಸ ಜರ್ನಿ ಶುರು ಮಾಡಲಿರುವ ಕ್ರೇಜಿ
Next articleರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ ಗಂಭೀರ ಆರೋಪ