ಇಡೀ ದಿನ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ

0
32

ಮಂಗಳೂರು: ಕೇಂದ್ರ ಕಾರಾಗೃಹದಲ್ಲಿ ಜಾಮರ್‌ ಅಳವಡಿಕೆಯ ತಾಂತ್ರಿಕ ಪ್ರಕ್ರಿಯೆ ಪ್ರಾಯೋಗಿಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸುತ್ತಮುತ್ತ ಶುಕ್ರವಾರ ಇಡೀ ದಿನ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ತಲೆದೋರಿತು.
ಬೆಳಗ್ಗಿನಿಂದಲೇ ನಗರದ ಪಿವಿಎಸ್‌, ಬಂಟ್ಸ್‌ಹಾಸ್ಟೆಲ್‌, ನಂತೂರು, ಲೇಡಿಹಿಲ್‌ ಮತ್ತಿತರ ಕಡೆಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸರಿಯಾಗಿ ಸಿಗದೆ ಗ್ರಾಹಕರು ಪರದಾಟ ನಡೆಸುವಂತಾಯಿತು. ಎಲ್ಲ ಮೊಬೈಲ್‌ ಕಂಪನಿಗಳ ನೆಟ್‌ವರ್ಕ್‌ ಸಿಗದ ಕಾರಣ ಇದು ಸಾಮೂಹಿಕ ತಾಂತ್ರಿಕ ಸಮಸ್ಯೆ ಎಂದು ಭಾವಿಸಲಾಗಿತ್ತು. ಕೊನೆಗೆ ಇಲ್ಲಿನ ಜೈಲಿನಲ್ಲಿ ಜಾಮರ್‌ ಅಳವಡಿಕೆಯ ಪ್ರಕ್ರಿಯೆ ನಡೆಯುತ್ತಿರುವುದೇ ಈ ಸಮಸ್ಯೆಗೆ ಕಾರಣ ಎಂಬುದು ಪತ್ತೆಯಾಯಿತು.
ಆದರೆ ನೆಟ್‌ವರ್ಕ್‌ ಸಮಸ್ಯೆಗೆ ಜಾಮರ್‌ ಕಾರಣ ಎಂಬುದನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಜೈಲಿನೊಳಗೆ ಹಾಳಾದ ಜಾಮರ್‌ನ್ನು ದುರಸ್ತಿಪಡಿಸಲಾಗಿದ್ದು, ಅದರ ಪ್ರಾಯೋಗಿಕ ನಿರ್ವಹಣೆ ನಡೆಸಲಾಗುತ್ತಿದೆ. ತಾಂತ್ರಿಕ ಸಿಬ್ಬಂದಿ ಶುಕ್ರವಾರ ಸಂಜೆವರೆಗೂ ಬಂದಿಲ್ಲ. ಎಲ್ಲೆಲ್ಲಿ ನೆಟ್‌ವರ್ಕ್‌ಗೆ ತೊಂದರೆಯಾಗುತ್ತದೆ ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಒಂದಷ್ಟು ಸಮಯ ಬೇಕಾಗಬಹುದು ಎಂದಿದ್ದಾರೆ.
ಜೈಲಿನ ಸುತ್ತಮುತ್ತ ವಾಣಿಜ್ಯ ಶಾಪ್‌ಗಳು, ಅಪಾರ್ಟ್‌ಮೆಂಟ್‌ಗಳು, ಮೊಬೈಲ್‌ ಕಂಪನಿಗಳ ಅಂಗಡಿಗಳು ಇದ್ದು, ನೆಟ್‌ವರ್ಕ್‌ ಇಲ್ಲದೆ ದಿನವಿಡೀ ಗ್ರಾಹಕರ ಆಕ್ರೋಶವನ್ನು ಎದುರಿಸಬೇಕಾಯಿತು.

Previous articleತೆಂಗಿನ ಕಡ್ಡಿ ಎದೆ ಭಾಗಕ್ಕೆ ಹೊಕ್ಕು ಗಂಭೀರ ಸ್ಥಿತಿಯಲ್ಲಿದ್ದ ಬಾಲಕ ಗುಣಮುಖ
Next articleಗೋದಾಮು ವ್ಯವಸ್ಥಾಪಕರು, ಹಾಸ್ಟೆಲ್ ವಾರ್ಡನ್ ಅಮಾನತು