ಉಡುಪಿ: ಕಳೆದ ಏಳೆಂಟು ವರ್ಷಗಳಿಂದ ಕರಾವಳಿ-ಮಲೆನಾಡು ಭಾಗದ ನಕ್ಸಲ್ ಚಟುವಟಿಕೆಗಳಿಂದ ಹಠಾತ್ತನೆ ನಾಪತ್ತೆಯಾಗಿ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದರು ಎನ್ನಲಾದ ಕುಂದಾಪುರ ತೊಂಬಟ್ಟು ಲಕ್ಷ್ಮೀ ಇಂದು ಬೆಳಗ್ಗೆ ಉಡುಪಿಯಲ್ಲಿ ಜಿಲ್ಲಾಡಳಿತದ ಎದುರು ಶರಣಾಗತರಾಗಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು ಎಸ್.ಪಿ ಕಚೇರಿಯಲ್ಲಿ ಶನಿವಾರ ಕೋಟೆಹೊಂಡ ರವೀಂದ್ರ ಶರಣಾಗತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯ ವಾಟ್ಸಪ್ ಗ್ರೂಪ್‌ನಲ್ಲಿ ಬಂದ ಪೋಸ್ಟ್ ಒಂದರಲ್ಲಿ ನಕ್ಸಲ್ ತೊಂಬಟ್ಟು ಲಕ್ಷ್ಮೀ ಕೂಡಾ ಫೆ.2ರಂದು ಉಡುಪಿ ಅಥವಾ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತರಾಗಲಿದ್ದಾರೆ ಎಂಬ ಮಾಹಿತಿ ಬಂದಿತ್ತು.
ಕುಂದಾಪುರ ತಾಲೂಕು ಅಮಾಸೆಬೈಲು ಸಮೀಪದ ತೊಂಬಟ್ಟು ನಿವಾಸಿ ಲಕ್ಷ್ಮೀ ದಶಕದ ಹಿಂದೆ ಸಹ ನಕ್ಸಲ್ ‘ಸಂಜೀವ’ ಎಂಬವರನ್ನು ಮದುವೆಯಾಗಿ, ಆಂಧ್ರಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಬದುಕು ಕಟ್ಟಿಕೊಂಡಿದ್ದರು. ಸಂಜೀವ ಆಂಧ್ರದ ಪೊಲೀಸರಿಗೆ ಶರಣಾಗಿದ್ದರು ಎಂದು ಹೇಳಲಾಗುತ್ತಿದ್ದರೂ, ಲಕ್ಷ್ಮೀ ಕುರಿತಂತೆ ಯಾವುದೇ ಮಾಹಿತಿ ಬಂದಿರಲಿಲ್ಲ ಎಂದು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ತಿಳಿಸಿದ್ದಾರೆ.