ಬೆಂಗಳೂರು : ಮಹಿಳೆಯರ ಸಬಲೀಕರಣಗೊಳಿಸುವುದು ಕೇವಲ ಅವಕಾಶಗಳ ಕುರಿತಾದದದ್ದು ಮಾತ್ರವೇ ಅಲ್ಲ, ಬದಲಿಗೆ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವುದೂ ಆಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಆರ್. ಲತಾ ಹೇಳಿದ್ದಾರೆ.
ನಗರದಲ್ಲಿ ಇತ್ತಿಚೆಗೆ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಆಟೋಮೋಟಿವ್ ಉದ್ಯಮದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇತ್ತೀಚೆಗೆ 2025ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಎರಡು ವಿಶಿಷ್ಟ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ಪ್ರೇರೇಪಿಸುವುದು ಕೂಡ ಬಹಳ ಮುಖ್ಯ ಆಗಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಒಳಗೊಳ್ಳುವಿಕೆಯ ಸಂಸ್ಕೃತಿಯನ್ನು ಸೃಷ್ಟಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಆಟೋಮೋಟಿವ್ ಉದ್ಯಮಕ್ಕೆ ಮಾದರಿಯಾಗಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಇಂತಹ ಯೋಜನೆಗಳು ಮಹಿಳೆಯರನ್ನು ವೃತ್ತಿಪರವಾಗಿ ಸಶಕ್ತಗೊಳಿಸುವುದರ ಜೊತೆಗೆ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತವೆ ಎಂದರು.
ಮಾರ್ಚ್ 12 ಮತ್ತು ಮಾರ್ಚ್ 16ರಂದು ಟಿಕೆಎಂನ ಬಿಡದಿಯ ಉತ್ಪಾದನಾ ಘಟಕದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ 700ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಉತ್ಸಾಹದಿಂದ ಭಾಗವಹಿಸಿದರು. ಈ ಕಾರ್ಯಕ್ರಮಗಳು ಒಳಗೊಳ್ಳುವಿಕೆ ಮತ್ತು ಉಲ್ಲಾಸದಾಯಕ ಕೆಲಸದ ವಾತಾವರಣವನ್ನು ಸೃಷ್ಟಿಸುವ ಕಂಪನಿಯ ಬದ್ಧತೆಗೆ ಪುರಾವೆಯಾಗಿ ಮೂಡಿಬಂದಿವು. ಕಾರ್ಯಕ್ರಮದಲ್ಲಿ ಟಿಕೆಎಂನ ಪ್ರತಿಭಾವಂತ ಮಹಿಳಾ ಉದ್ಯೋಗಿಗಳು ಸಾಂಸ್ಕೃತಿಕ ಪ್ರದರ್ಶನಗಳನ್ನೂ ನೀಡಿದರು. ಮಹಿಳಾ ಉದ್ಯೋಗಿಗಳ ಗಾಯನ, ನೃತ್ಯ ಮತ್ತು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಪ್ರದರ್ಶಗಳಿಗೆ ಮೆಚ್ಚುಗೆ ವ್ಯಕ್ತವಾಯಿತು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಫೈನಾನ್ಸ್ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ್ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನಲ್ಲಿ ನಾವು ನಮ್ಮ ಮಹಿಳಾ ಉದ್ಯೋಗಿಗಳು ನೀಡುತ್ತಿರುವ ಕೊಡುಗೆಗಳನ್ನು ಗೌರವಿಸುತ್ತೇವೆ ಮತ್ತು ಮೆಚ್ಚುಗೆ ಸಲ್ಲಿಸುತ್ತೇವೆ. ಎರಡೂ ಕಾರ್ಯಕ್ರಮಗಳಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದು, ಈ ಭಾಗವಹಿಸುವಿಕೆಯು ಲಿಂಗ ವೈವಿಧ್ಯತೆಯ ಕಡೆಗಿನ ನಮ್ಮ ಗಮನವನ್ನು ತೋರಿಸುತ್ತದೆ. 2030ರ ವೇಳೆಗೆ ಶೇ.30ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಸಾಧಿಸುವ ನಮ್ಮ ಗುರಿಯತ್ತ ಮುನ್ನಡೆಯಲು ಈ ಕಾರ್ಯಕ್ರಮಗಳು ನಮಗೆ ಪ್ರೇರಣೆ ನೀಡಿವೆ. ಮಹಿಳಾ ಸ್ನೇಹಿ ಕೆಲಸದ ವಾತಾವರಣ ಸೃಷ್ಟಿ, ವೃತ್ತಿ ವಿರಾಮದ ಬಳಿಕ ಮರಳುವ ಮಹಿಳೆಯರಿಗೆ ಮರುನೇಮಕಾತಿ ನೀತಿಗಳು, ರಿಮೋಟ್ ಕೆಲಸದ ಅವಕಾಶಗಳು ಮುಂತಾದ ನಮ್ಮ ಯೋಜನೆಗಳ ಮೂಲಕ ನಾವು ಒಳಗೊಳ್ಳುವಿಕೆಯ ಕೆಲಸದ ವಾತಾವರಣವನ್ನು ರೂಪಿಸಲು ಸದಾ ಬದ್ಧರಾಗಿದ್ದೇವೆ ಎಂದರು.