ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ

0
29

ಮಂಗಳೂರು: ಗುರುತರ ಆರೋಪಕ್ಕೆ ಒಳಗಾಗಿರುವ ದ.ಕ. ಜಿಲ್ಲಾ ಕಬಡ್ಡಿ ಅಮೆಚೂರ್‌ ಅಸೋಸಿಯೇಶನ್‌ನ್ನು ಬರ್ಖಾಸ್ತುಗೊಳಿಸಿ ಕೂಡಲೇ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ ವಿರುದ್ಧ ಅನೇಕ ದೂರುಗಳ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಅಡಿಯಲ್ಲಿ ತನಿಖೆ ನಡೆಸಿ ಜನವರಿ 2023ರಂದು ವರದಿ ನೀಡಲಾಗಿದೆ. ಆ ವರದಿಯ ಆಧಾರದಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಸೂಚಿಸಲಾಗಿದೆ. ಆದರೆ ಸಹಕಾರ ಇಲಾಖೆ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದೆ. ಅದಕ್ಕೆ ಸಚಿವರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಜಿಲ್ಲೆಯ ಕಬಡ್ಡಿ ಆಟಗಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರವೇ ಆಡಳಿತಾಧಿಕಾರಿ ನೇಮಿಸಿ ಕಬಡ್ಡಿ ಆಟಗಾರರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಈ ಕಬಡ್ಡಿ ಅಸೋಸಿಯೇಷನ್‌ಗೆ ರಾಕೇಶ್‌ ಮಲ್ಲಿ 2009ರಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಆದರೆ ಅವರು ಸದಸ್ಯರಾಗಿದ್ದು 2012ರಲ್ಲಿ ಎಂದು ದಾಖಲೆಗಳು ತೋರಿಸುತ್ತವೆ. ಅವರು ಕಾನೂನು ಬಾಹಿರವಾಗಿ ಸದಸ್ಯರಾಗದೆ ಉಪಾಧ್ಯಕ್ಷರಾಗಿದ್ದಾರೆ. 2012ರಿಂದ 2024ರ ವರೆಗೆ ಇಲ್ಲಿವರೆಗೆ ನಿರಂತರ ಅವರು ಅಧ್ಯಕ್ಷರಾಗಿದ್ದಾರೆ. ಕಬಡ್ಡಿಗೆ ರಾಕೇಶ್‌ ಮಲ್ಲಿಯ ಕೊಡುಗೆ ಏನು ಎಂದು ಅವರೇ ತಿಳಿಸಲಿ ಎಂದರು.
ದ.ಕ. ಕಬಡ್ಡಿ ಅಸೋಸಿಯೇಷನ್‌ ಕಬಡ್ಡಿ ಆಟಗಾರರಿಗೆ ಯಾವುದೇ ಪ್ರೋತ್ಸಾಹ ನೀಡದ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪಿಸಿದ್ದೇ ವಿನಃ ಅವಮಾನಿಸಿಲ್ಲ. ಇಲ್ಲಿ ಪ್ರತಿಭಾನ್ವಿತರಿಗೆ ಅವಕಾಶ ಸಿಗುತ್ತಿಲ್ಲ. ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರಿದ್ದರೂ, ಕೋಚ್‌ಗಳು, ಮಂಗಳೂರು ವಿವಿಯಲ್ಲಿ ಪದಕ ಗೆದ್ದ ಕಬಡ್ಡಿ ಆಟಗಾರರು ಇದ್ದರೂ ಅವರಿಗೆ ಅವಕಾಶ ನೀಡುತ್ತಿಲ್ಲ. ದ.ಕ. ಜಿಲ್ಲೆಯ ಕಬಡ್ಡಿ ಆಟಗಾರರು ಮುಂದೆಯಾದರೂ ದೇಶ, ರಾಜ್ಯವನ್ನು ಪ್ರತಿನಿಧಿಸುವ ಉದ್ದೇಶದಿಂದ ಈ ಆಗ್ರಹ ಮಾಡುತ್ತಿರುವುದಾಗಿ ಹರೀಶ್‌ ಪೂಂಜಾ ಹೇಳಿದರು.
ಉಚಿತ ಮ್ಯಾಟ್‌ ಬಾಡಿಗೆಗೆ!
ಮಂಗಳೂರಿನ ಸ್ಮಾರ್ಟ್‌ಸಿಟಿಯಲ್ಲಿ ಕಬಡ್ಡಿ ಕ್ರೀಡಾಂಗಣ ನಿರ್ಮಾಣಕ್ಕೆ ಅಂದಿನ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಈಗಿನ ಶಾಸಕ ವೇದವ್ಯಾಸ್‌ ಕಾಮತ್‌ರ ಶ್ರಮ ಕಾರಣ. ನಾನು ಕೂಡ ವಿವಿ ಕಬಡ್ಡಿ ಆಟಗಾರನಾಗಿದ್ದು, ಈಗಲೂ ಕಬಡ್ಡಿ ಪ್ರೋತ್ಸಾಹಕ. ಆಯಾ ಜಿಲ್ಲೆಗಳ ಕಬಡ್ಡಿ ಅಮೆಚೂರ್‌ಗೆ ನೀಡಿದ ಮ್ಯಾಟ್‌ನ್ನು ಈ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲಾಖೆಯಿಂದ ಬಾಡಿಗೆ ನೆಲೆಯಲ್ಲಿ ಮ್ಯಾಟ್‌ನ್ನು ನೀಡಲಾಗುತ್ತಿದೆ. ಇದು ಕಬಡ್ಡಿ ಪಟುಗಳಿಗೆ ಮಾಡುವ ಅನ್ಯಾಯ ಎಂದರು.
ದ.ಕ. ಕಬಡ್ಡಿ ಅಮೆಚೂರ್‌ಗೆ ಇಲ್ಲಿವರೆಗೆ ಸ್ವಂತ ಕಟ್ಟಡ ಇಲ್ಲ, ಕಾರ್ಯದರ್ಶಿಯ ಮನೆ ಹೆಸರಿನ ವಿಳಾಸ ಇದೆ. ಕಬಡ್ಡಿ ಆಟಗಾರರಿಗೆ ಕನಿಷ್ಠ ಆರೋಗ್ಯ ವಿಮೆಯನ್ನೂ ಮಾಡಿಸಿಲ್ಲ. ಎಬಿಸಿ ಮಾದರಿಯಲ್ಲಿ ಪಂದ್ಯ ನಡೆಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.

Previous articleಇಸ್ರೇಲ್‌ ಮೂಲದ ಖ್ಯಾತ ಡಿಜೆ ಸಜಂಕಾ ಕಾರ್ಯಕ್ರಮ ರದ್ದು
Next articleಸಂಸ್ಕೃತಿ, ಕೃಷಿ ಕ್ಷೇತ್ರಕ್ಕೆ ಹವ್ಯಕರ ಕೊಡುಗೆ ಅಪಾರ