ಅಪಹರಣ ಪ್ರಕರಣ

0
7

ಭಾಗ: 02

ಗಾಬರಿಯಿಂದ ನನ್ನ ಸ್ನೇಹಿತರಾದ ಪೋಲೀಸ್ ಅಧಿಕಾರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿದೆ, ಅವರು, “ತಕ್ಷಣವೇ ಆರ್.ಟಿ.ನಗರ ಪೋಲೀಸ್ ಸ್ಟೇಶನ್ನಿಗೆ ಹೋಗಿ ಒಂದು ದೂರು ನೀಡಿ. ಯಾಕೆಂದರೆ ಇದುವರೆಗೂ ಈ ಘಟನೆ ಪೋಲೀಸರಿಗೆ ಗೊತ್ತಿಲ್ಲ. ಕೇಸು ದಾಖಲಾಗದೆ ಏನನ್ನೂ ಮಾಡಲಾಗುವುದಿಲ್ಲ”. ರಾತ್ರಿ ಹನ್ನೆರಡೂವರೆಗೆ ಆರ್.ಟಿ. ನಗರ ಪೋಲೀಸ್ ಸ್ಟೇಶನ್ನಿಗೆ ಹೋಗಿ ದೂರು ದಾಖಲು ಮಾಡಿದೆ. ನನ್ನ ಸ್ನೇಹಿತರು ಅಲ್ಲಿಗೆ ಮೊದಲೇ ಫೋನ್ ಮಾಡಿ ನಾನು ಬರುವ ವಿಷಯ ತಿಳಿಸಿದ್ದರಿಂದ ಅವರು ತುಂಬ ಸಹಕಾರ ನೀಡಿದರು. ಅರುಣಾಳ ಫೋಟೋ ಇದೆಯೇ ಎಂದು ಕೇಳಿದಾಗ ರಾತ್ರಿಯೇ ಆಫೀಸ್ ತೆಗೆಯಿಸಿ, ಫೋಟೋ ಅವರಿಗೆ ಕೊಟ್ಟೆ. ಆಕೆಯ ಗಂಡನ ಫೋಟೋ ಕೇಳಿದರು. ಅವನನ್ನು ನಾನು ನೋಡಿಯೇ ಇರಲಿಲ್ಲ. ಅರುಣಾಳ ವಿಳಾಸ, ಆಕೆಯ ಒಂದೆರಡು ಈಮೇಲ್ ಪರೀಕ್ಷೆ ಮಾಡಿದಾಗ ಅವನ ಹೆಸರು ಗೊತ್ತಾಯಿತು. ಪೋಲೀಸ್ ಅಧಿಕಾರಿ, “ಚಿಂತೆ ಮಾಡಬೇಡಿ, ನಾವು ಆತನ ಹಿನ್ನೆಲೆಯನ್ನು ಪತ್ತೆ ಮಾಡುತ್ತೇವೆ” ಎಂದರು.
ಮನೆಗೆ ಮರಳಿ ಬಂದಾಗ ರಾತ್ರಿ ಒಂದೂವರೆ. ಮನೆಯಲ್ಲಿ ಯಾರಿಗೂ ನಿದ್ರೆಯಿಲ್ಲ. ಎಲ್ಲರಿಗೂ ತುಂಬ ಆತಂಕ. ನನ್ನ ಹೆಂಡತಿಯಂತೂ ಇಬ್ಬರೂ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಮಲಗಿಸಿ ತಾನೂ ಅಲ್ಲಿಯೇ ಕುಳಿತಿದ್ದಳು. ಎರಡು ಗಂಟೆಗೆ ಮತ್ತೆ ಬಂತು ಫೋನ್. ಈಗ ಯಾವುದಾದರೂ ಫೋನ್ ಬಂದರೆ ಭಯವಾಗುವಂತಿತ್ತು. ಅದೇ ಗೊಗ್ಗರು ಧ್ವನಿ, “ಈಗ ಬೇರೆ ಜಾಗದಲ್ಲಿದ್ದೇವೆ. ಇದನ್ನೇನಾದರೂ ಪೋಲೀಸರಿಗೆ ತಿಳಿಸಿ ಟ್ರಾಕ್ ಮಾಡಿದರೆ, ಎಂಟು ಗಂಟೆಯವರೆಗೆ ಕಾಯಬೇಕಾಗಿಲ್ಲ, ಯೋಗೇಶ್‌ನ ಹೆಣ ಬೆಂಗಳೂರಿನ ರೇಲ್ವೆ ಹಳಿಗಳ ಮೇಲೆ ಇನ್ನೊಂದು ತಾಸಿನಲ್ಲಿ ಸಿಗುತ್ತದೆ. ಈಗ ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಬೆಳಿಗ್ಗೆ ಆರು ಗಂಟೆಗೆ ನೀವೇ ಅರುಣಾಳ ಮನೆಗೆ ಹೋಗಿ, ಅವಳನ್ನು, ಅವಳ ತಂದೆ-ತಾಯಿಯರನ್ನು ಒಪ್ಪಿಸಿ ಕರೆದುಕೊಂಡು ಬರಬೇಕು. ಆಕೆಯನ್ನು ಕರೆದುಕೊಂಡು ಬರಬೇಕಾದ ವಿಳಾಸವನ್ನು ಬದಲಿಮಾಡಿದ್ದೇನೆ. ಅದನ್ನು ನಿಮಗೆ ಏಳು ಗಂಟೆಗೆ ಮೆಸೇಜ್ ಮಾಡುತ್ತೇನೆ. ಆಕೆಯನ್ನು ಬಾಡಿಗೆಯ ಟ್ಯಾಕ್ಸಿಯಲ್ಲಿ ಕರೆತರುವಂತಿಲ್ಲ. ನಿಮ್ಮ ಆಫೀಸ್ ಕಾರಿನಲ್ಲಿಯೇ ತರಬೇಕು. ನಿಮ್ಮ ಡ್ರೈವರ‍್ರೇ ಅದನ್ನು ನಡೆಸಿಕೊಂಡು ಬರಬೇಕು. ಬೇರೆಯವರು ಕಂಡರೆ ಅವರಿಗೂ, ಯೋಗೇಶ್‌ಗೂ ಗುಂಡು ಬೀಳುತ್ತದೆ. ಹೇಳಿದ ಸ್ಥಳದಲ್ಲಿ ಅರುಣಾಳನ್ನು ಇಳಿಸಬೇಕು. ಇಳಿಸಿ ಮುಂದೆ ಕಾರು ಹೋಗಬೇಕು. ಇನ್ನೂರು ಅಡಿ ದೂರದಲ್ಲಿ ಎಡಗಡೆ ಒಂದು ಬಸ್‌ಸ್ಟಾಪ್ ಇದೆ. ಅಲ್ಲಿ ಯೋಗೇಶ್ ಕುಳಿತಿರುತ್ತಾನೆ. ಅವನನ್ನು ಕರೆದುಕೊಂಡು ಹೋಗಿ. ಅರುಣಾ ಇಳಿಯದಿದ್ದರೆ, ಯೋಗೇಶ್ ಬಸ್ ಸ್ಟಾಪಿನಲ್ಲೇ ಹೆಣವಾಗಿರುತ್ತಾನೆ”.
ಅರುಣಾಳಿಗೆ ಫೋನ್ ಮಾಡಿದೆ. ರಾತ್ರಿ ಎರಡೂವರೆಗೆ ನನ್ನ ಫೋನ್ ಕೇಳಿ ಆಕೆಗೆ ಗಾಬರಿಯಾಗಿರಬೇಕು. ನಿಧಾನಕ್ಕೆ ವಿಷಯವನ್ನು ತಿಳಿಸಿದೆ. ಆಕೆ ಜೋರಾಗಿ ಅಳತೊಡಗಿದಳು, “ಸರ್, ಇವನನ್ನು ಮದುವೆಯಾಗಿ ನನ್ನ ಬದುಕಂತೂ ಹಾಳಾಗಿ ಹೋಯಿತು. ಆದರೆ ಪಾಪ! ಯೋಗೇಶ್ ನದೇನು ಕರ್ಮ ಸರ್? ಅವನ ಹೆಂಡತಿ ಮಕ್ಕಳ ಗತಿಯೇನು? ಸರ್, ನಾನು ಅವನ ಬಳಿಗೆ ಹೋದರೆ ಅವನು ನನ್ನನ್ನು ಕೊಂದೇ ಬಿಡುತ್ತಾನೆ. ಅವನದೊಂದು ವಿಕ್ಷಿಪ್ತ ಪ್ರೀತಿ ಸರ್. ಅದೊಂದು ರೀತಿಯ ಹಿಂಸಾತ್ಮಕ ಪ್ರೀತಿ. ಆತ ನನ್ನನ್ನು ಬಿಟ್ಟಿರಲಾರ. ಆದರೆ ಜೊತೆಗಿದ್ದರೆ ಯಾವುದೋ ವಿಷಯಕ್ಕೆ ಚಿತ್ರಹಿಂಸೆ ಕೊಟ್ಟು ಸಂತೋಷಪಡುತ್ತಾನೆ. ನನ್ನ ಮೈಯನ್ನೆಲ್ಲ ಸಿಗರೇಟ್ ಬೆಂಕಿಯಿಂದ ಸುಟ್ಟಿದ್ದಾನೆ. ಒಮ್ಮೆ ಹೊಟ್ಟೆಯಲ್ಲಿ ಚಾಕೂ ತಿವಿದಿದ್ದ. ನನ್ನನ್ನು ಬಿಟ್ಟು ವಿಚ್ಛೇದನ ಪಡೆದುಕೊಂಡು ಹೋಗು ಎಂದರೆ ಅದಕ್ಕೂ ಒಪ್ಪುವುದಿಲ್ಲ. ಮೂರು ತಿಂಗಳು ಹಿಂದೆ ಹೀಗೆಯೇ ಜಗಳವಾಗಿ, ನಾನು ಮಗಳನ್ನು ಕರೆದುಕೊಂಡು ತಂದೆಯ ಮನೆಗೆ ಹೋಗಿಬಿಡುತ್ತೇನೆ ಎಂದು ಹೆದರಿಸಿದಾಗ ಏನು ಮಾಡಿದ ಗೊತ್ತೇ ಸರ್? ಸರಸರನೆ ಹೊರಗೆ ಹೋಗಿ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಸ್ಕೂಟರ್ ಕೀ ತೆಗೆದುಕೊಂಡು ಪೆಟ್ರೋಲ್ ಟ್ಯಾಂಕ್‌ನ್ನು ತೆರೆದ. ಎಲ್ಲರೂ ನೋಡುತ್ತಿದ್ದಂತೆ ಕಡ್ಡಿ ಗೀರಿ ಬೆಂಕಿಯನ್ನು ಟ್ಯಾಂಕಿನಲ್ಲಿ ಹಾಕಿಬಿಟ್ಟ. ಇಡೀ ಸ್ಕೂಟರ್ ಭಗ್ಗೆಂದು ಉರಿದು ಹೋಯಿತು ಸರ್. ಈಗ ಮನೆಗೆ ಹ್ಯಾಗೆ ಹೋಗುತ್ತೀಯಾ ನೋಡುತ್ತೇನೆ ಎಂದು ನಕ್ಕ. ನನಗೆ ಮೈ ಉರಿದು ಹೋಯಿತು. ಕಳೆದ ವಾರವಂತೂ ಅವನ ತೊಂದರೆ ನನಗೆ ಮತ್ತು ಮಗಳಿಗೆ ಹೆಚ್ಚಿದ್ದರಿಂದ, ಅವನಿಗೆ ಹೇಳದೇ ಮಗಳನ್ನು ಕರೆದುಕೊಂಡು ತಂದೆಯ ಮನೆಗೆ ಬಂದುಬಿಟ್ಟಿದ್ದೇನೆ. ಅದಕ್ಕೇ ಕಾಲೇಜಿಗೂ ಬಂದಿಲ್ಲ ಸರ್. ಯಾವುದೋ ಒಂದು ತೀರ್ಮಾನವಾಗುವವರೆಗೆ ನಾನು ಮನೆಯಿಂದ ಹೊರಗೇ ಬರುವಂತಿಲ್ಲ” ಎಂದು ಗೋಗರೆದಳು.
ಈಗ ಏನು ಮಾಡುವುದು ಎಂದು ಕೇಳಿದಾಗ ಆಕೆ, “ಸರ್, ಈಗ ಎರಡೇ ದಾರಿಗಳು ಎನ್ನಿಸುತ್ತದೆ. ನನ್ನ ಬಲಿ ಅಥವಾ ಯೋಗೇಶ್ ಬಲಿ. ನೀವು ಹೇಗೆ ಹೇಳುತ್ತೀರೋ ಹಾಗೆಯೇ ಮಾಡುತ್ತೇನೆ” ಎಂದಳು. “ನಿನ್ನ ಗಂಡ ಎಲ್ಲಿಯವನು? ಏನು ಅವನ ಹಿನ್ನಲೆ?” ಎಂದು ಕೇಳಿದೆ, ಆಕೆ, “ಸರ್, ನಮ್ಮದು ಪ್ರೇಮ ವಿವಾಹ. ಈತ ಕಾಶ್ಮೀರದ ಬಾರಾಮುಲ್ಲಾ ಪ್ರದೇಶದವನು. ಕರ್ನಾಟಕದಲ್ಲೇ ಇಂಜಿನೀಯರಿಂಗ್ ಮಾಡಿ ಕೆಲಸ ಮಾಡುತ್ತಿದ್ದ. ಅವನು ಟೆರರಿಸ್ಟ್ ಅಲ್ಲ ಆದರೆ ಅಂಥವರ ಕೆಲವರ ಪರಿಚಯ, ಸಂಪರ್ಕ ಅವನಿಗಿದೆ. ಅವನಿಗೆ ಮನಸ್ಸು ಬಂದಾಗ ಅವನಷ್ಟು ಪ್ರೀತಿ ಮಾಡುವವರಿಲ್ಲ ಆದರೆ ಯಾವಾಗ ಮನಸ್ಸು ಬದಲಾಯಿಸುತ್ತದೋ, ಉಗ್ರವಾಗುತ್ತದೋ, ಹೇಳುವುದು ಕಷ್ಟ. ಈಗ ಅವನಿಗೆ ಕೆಲಸವಿಲ್ಲ. ಬೇರೆ ಕೆಲಸ ಸಿಗುತ್ತಿಲ್ಲ. ಹತಾಶನಾಗಿದ್ದಾನೆ” ಎಂದಳು. “ನೀನು ಹೇಳಿದ್ದೆಲ್ಲ ಸರಿಯಮ್ಮ. ಆದರೆ ಈಗ ಯೋಗೇಶ್‌ನನ್ನು ಉಳಿಸಿಕೊಳ್ಳಬೇಕಲ್ಲ. ನನಗೆ ನೀನೂ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಾರದು ಮತ್ತು ಯೋಗೇಶನೂ ಈ ಸಮಸ್ಯೆಯಿಂದ ಪಾರಾಗಬೇಕು. ನಾನು ಈಗ ಪೋಲೀಸ್ ಇಲಾಖೆಯ ಸಹಕಾರ ಕೇಳಿದ್ದೇನೆ. ಅವರು ಹೇಗೆ ಹೇಳುತ್ತಾರೋ ಹಾಗೆಯೇ ಮಾಡೋಣ. ಯಾವುದಕ್ಕೂ ನೀನು ಬೆಳಿಗ್ಗೆ ಆರು ಗಂಟೆಗೆ ಸಿದ್ಧವಾಗಿರು. ನಿಮ್ಮ ತಾಯಿ-ತಂದೆಯರಿಗೆ ವಿಷಯ ತಿಳಿಸಿ ಧೈರ್ಯ ಹೇಳು” ಎಂದು ಆಕೆಯನ್ನು ಒಪ್ಪಿಸಿದೆ.
ನನ್ನ ಪರಿಚಯದ ಪೋಲೀಸ್ ಅಧಿಕಾರಿಗೆ ಎಲ್ಲ ವಿವರಗಳನ್ನು ತಿಳಿಸಿದೆ. ಅವರು, “ಇದೊಂದು ತುಂಬ ಸೂಕ್ಷ್ಮ ಕೆಲಸ. ಅವನು ಕಾಶ್ಮೀರದವನು ಮತ್ತು ಬಾರಾಮುಲ್ಲಾ ಪ್ರದೇಶದವನು ಎಂದಾಗ ಮತ್ತಷ್ಟು ಸೂಕ್ಷ್ಮವಾಗುತ್ತದೆ. ಇದನ್ನು ನಮ್ಮ ನಗರ ಕಮೀಶನರ್ ಗಮನಕ್ಕೆ ತರಬೇಕು. ಅವರ ಮನೆಯಲ್ಲೇ ಅವರನ್ನು ಬೆಟ್ಟಿಯಾಗಬೇಕು. ನೀವು ಐದು ಗಂಟೆಗೆ ಅವರ ಮನೆಯ ಹತ್ತಿರ ಬಂದುಬಿಡಿ” ಎಂದರು. ನನಗೆ ಬೇರೆ ದಾರಿಯಿಲ್ಲ. ಐದು ಗಂಟೆಗೆ ಪೋಲೀಸ್ ಕಮೀಶನರ್ ಮನೆಗೆ ಹೋದೆ. ಪಾಪ! ಅವರು ಎದ್ದು ಹೊರಬಂದು ನಮ್ಮ ಹತ್ತಿರ ಮಾತನಾಡಿದರು. ನಂತರ ಎಸ್.ಪಿ. ಯವರಿಗೆ ಫೋನ್ ಮಾಡಿ, ಸರಿಯಾಗಿ, ಎಚ್ಚರದಿಂದ ಕಾರ್ಯಾಚರಣೆ ಮಾಡಿ ಎಂದು ಆದೇಶಿಸಿದರು. ಆ ಕಾರ್ಯಾಚರಣೆ ಏನು ಎಂಬುದು ನನಗೆ ತಿಳಿಯಲಿಲ್ಲ. ಅವರ ಮನೆಯಿಂದ ಎಸ್.ಪಿ ಯವರ ಮನೆಗೆ ಹೋದೆವು. ಆಗಲೇ ಅವರ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಬಂದಿದ್ದರು. ನೋಡಿದರೆ ಮಧ್ಯವಯಸ್ಸಿನ ಭಿಕ್ಷುಕರಂತಿದ್ದರು. ಅವರ ಕೊಳೆಯಾದ ಬಟ್ಟೆಗಳು, ಕೆದರಿದ ತಲೆ ಒಂದು ಕಥೆ ಹೇಳಿದರೆ, ಅವರ ಮಜಬೂತಾದ ಬೂಟುಗಳು, ಸೊಂಟದಲ್ಲಿದ್ದ ರಿವಾಲ್ವರ್ ಬೇರೆ ಕಥೆ ಹೇಳುತ್ತಿದ್ದವು. ಅವರು ಮಾರುವೇಷದಲ್ಲಿದ್ದ ಪೋಲೀಸ್ ಅಧಿಕಾರಿಗಳು, ಶಾರ್ಪ ಶೂಟರ್ಸ್!
ಅವರಲ್ಲೊಬ್ಬ ಹೇಳಿದರು, “ಸರ್, ನಿಮ್ಮ ಕಾರಿನಲ್ಲಿ ನಾವು ಹೋಗುತ್ತೇವೆ. ನಿಮಗೆ ಏಳು ಗಂಟೆಗೆ ಲೋಕೇಶನ್ ಸಿಕ್ಕ ತಕ್ಷಣ ನಮಗೆ ಕೊಡಿ. ನೀವು ಬರುವುದು ಬೇಡ. ಆ ಹೆಣ್ಣುಮಗಳೂ ಬರುವುದು ಬೇಡ. ನಮಗೆ ಯೋಗೇಶ್‌ನ ಫೋಟೋ ಕೊಡಿ. ಅವನಿಗೇನೂ ಆಗದಂತೆ ಪ್ರಯತ್ನ ಮಾಡುತ್ತೇವೆ. ಆದರೆ ಕೆಲವೊಮ್ಮೆ ಗದ್ದಲದಲ್ಲಿ ಅವನಿಗೂ ಪೆಟ್ಟಾಗಬಹುದು”. ನನ್ನ ಕಾರಿನಲ್ಲಿ ಅವರು ಹೊರಟರು.
ಆರು ಗಂಟೆಗೆ ಮತ್ತೆ ಫೋನ್ ಬಂತು. ಈ ಬಾರಿ ಧ್ವನಿ ಹೆಚ್ಚು ಕರ್ಕಶವಾಗಿರಲಿಲ್ಲ. ಇದನ್ನೇ ಅವಕಾಶ ಮಾಡಿಕೊಂಡು ನಿಧಾನವಾಗಿ ಮಾತನಾಡಿದೆ, “ಅಯ್ಯಾ, ನಿನ್ನ ಬಗ್ಗೆ ನಿನ್ನ ಹೆಂಡತಿಯ ಹತ್ತಿರ ಮಾತನಾಡಿದೆ. ಆಕೆ ನಿನ್ನನ್ನು ನಿಜವಾಗಿ ಪ್ರೀತಿಸುತ್ತಾಳೆ, ಆದರೆ ನಿನ್ನ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ನೀನೂ ಆಕೆಯನ್ನು ಪ್ರೀತಿ ಮಾಡುತ್ತೀಯಾ, ಆದರೆ ಹಿಂಸಿಸುತ್ತೀಯಾ ಪ್ರೀತಿ ಇದ್ದರೆ ಹಿಂಸೆ ಯಾಕೆ? ಹಿಂಸೆಯನ್ನು ಬಿಡು. ಆಕೆಗೆ, ನಿನ್ನ ಮಗಳಿಗೆ ಪ್ರೀತಿ ಕೊಡು. ಅವರು ಯಾಕೆ ನಿನ್ನನ್ನು ಬಿಟ್ಟು ಹೋಗುತ್ತಾರೆ? ಈಗ ಯೋಗೇಶ್‌ನಿಗೆ ನೀನು ತೊಂದರೆ ಕೊಟ್ಟರೆ ಆಕೆ ನಿನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ. ಸಂಬಂಧ ಪೂರ್ತಿ ಕಡಿದೇ ಹೋಗುತ್ತದೆ. ನಿನಗೆ ನಿಜವಾಗಿಯೂ ಅರುಣಾ ಮೇಲೆ ಪ್ರೀತಿ ಇದ್ದರೆ ಯೋಗೇಶ್‌ನನ್ನು ಬಿಟ್ಟು ನನ್ನ ಬಳಿಗೆ ಬಾ. ಆಕೆಯನ್ನು ಕರೆಸುತ್ತೇನೆ. ಕುಳಿತು ಮಾತನಾಡಿದರೆ ಬೆಟ್ಟದಂಥ ಸಮಸ್ಯೆ ಕೂಡ ಕರಗುತ್ತದೆ” ಎಂದು ಒಂದಷ್ಟು ಮೇಷ್ಟ್ರಗಿರಿಯ ಉಪದೇಶ ಮಾಡಿದೆ. ಅದು ನಾಟಿದಂತೆ ತೋರಿತು. “ಇನ್ನರ್ಧ ಗಂಟೆಗೆ ಫೋನ್ ಮಾಡುತ್ತೇನೆ” ಎಂದು ಮಾತು ತುಂಡರಿಸಿದ.
ಏಳು ಗಂಟೆಗೆ ಮತ್ತೆ ಫೋನ್, “ಸರ್, ನೀವು ಹೇಳಿದ ಹಾಗೆ ಯೋಗೇಶ್‌ನನ್ನು ಬಿಡುತ್ತಿದ್ದೇನೆ. ಇನ್ನೊಂದು ತಾಸಿಗೆ ನಿಮ್ಮ ಹತ್ತಿರ ಬರುತ್ತಾನೆ. ಅರುಣಾಳಿಗೆ ತಿಳಿಹೇಳಿ. ನಮ್ಮ ಸಂಸಾರ ಸರಿ ಮಾಡಿ” ಧ್ವನಿಯಲ್ಲಿ ಅಪ್ಪಣೆ ಇರಲಿಲ್ಲ, ಬೇಡಿಕೆ ಇತ್ತು. ವಿಷಯವನ್ನು ಪೋಲೀಸರಿಗೆ ತಿಳಿಸಿ ಕಾರ್ಯಾಚರಣೆ ಬೇಡ ಎಂದು ಹೇಳಿದೆ. ಎಂಟೂವರೆಯ ಹೊತ್ತಿಗೆ ಯೋಗೇಶ್ ಒಂದು ಆಟೋದಲ್ಲಿ ಬಂದಿಳಿದ. ನಾನೇ ಆಟೋಕ್ಕೆ ದುಡ್ಡು ಕೊಟ್ಟು ಒಳಗೆ ಕರೆದೆ. ಹಸಿದು ಕಂಗಾಲಾಗಿದ್ದ. ಆದರೆ ಮುಖದಲ್ಲಿ ಸಂಕಟದಿಂದ ಪಾರಾದ ಸಂತೋಷವಿತ್ತು.
ಎಲ್ಲವೂ ಸುಖಾಂತವಾಗಿತ್ತು. ಹನ್ನೆರಡು ತಾಸಿನ ಆತಂಕ ಕಳೆದಿತ್ತು. ಯಾರ ತಪ್ಪಿಗೆ ಯಾರಿಗೆ ಶಿಕ್ಷೆಯೋ? ಯಾರದೋ ಸಮಸ್ಯೆ ಆದರೆ ಯಾರನ್ನೋ ಕುಕ್ಕುತ್ತದೆ. ಪ್ರಪಂಚದ ವ್ಯವಸ್ಥೆಯೇ ಹಾಗೆ. ಸ್ವರ್ಗದಲ್ಲಿ ಜಗಳವಾಡಿದವರು ವಶಿಷ್ಠ, ವಿಶ್ವಾಮಿತ್ರರು, ಆದರೆ ಒದ್ದಾಡಿ, ಪರೀಕ್ಷೆಗೆ ಸಿಲುಕಿದವ ಹರಿಶ್ಚಂದ್ರ!

ಭಾಗ 01 : ಲಿಂಕ್‌

Previous articleನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ
Next articleದೆಹಲಿ ಮದ್ಯನೀತಿ ಹಗರಣ: ಕೆಸಿಆರ್ ಪುತ್ರಿ ಕವಿತಾ ರೆಡ್ಡಿಗೆ ED ಸಮನ್ಸ್