ಚಿಕ್ಕೋಡಿ: ಬರ್ಬರ ಹತ್ಯೆಯಾಗಿದ್ದ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ ಶ್ರೀ ೧೦೮ ಕಾಮಕುಮಾರರಾಜ ಮಹಾರಾಜರನ್ನು ಜೈನ ಧರ್ಮದ ಸಂಪ್ರದಾಯದAತೆ ಆಶ್ರಮದ ಬದಿಯ ಕೃಷಿ ಭೂಮಿಯಲ್ಲಿ ರವಿವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶನಿವಾರ ರಾಯಬಾಗ ತಾಲೂಕಿನ ಕಟಕಭಾವಿ ಜಮೀನಿನ ಕೊಳವೆಬಾವಿಯಿಂದ ತೆಗೆದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಬೆಳಗ್ಗೆ ಅಲ್ಲಿಂದ ನೇರವಾಗಿ ಪೊಲೀಸ್ ಭದ್ರತೆಯಲ್ಲಿ ಹಿರೇಕೋಡಿಯ ನಂದಿ ಪರ್ವತ ಆಶ್ರಮಕ್ಕೆ ಮೃತದೇಹ ತರಲಾಯಿತು. ನಾಂದಣಿಯ ಜೀನಸೇನ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ವರೂರದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ನೇತೃತ್ವ, ಮಾರ್ಗದರ್ಶನದಲ್ಲಿ ಮುನಿಗಳ ಪೂರ್ವಾಶ್ರಮದ ಸಹೋದರನ ಪುತ್ರ ಭೀಮಗೌಂಡ ಉಗಾರೆ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿದರು.
ಅಂತ್ಯಕ್ರಿಯೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಧುರೀಣ ಉತ್ತಮ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ, ವೀಣಾ ಪಟ್ಟಣಕುಡಿ ಸೇರಿದಂತೆ ಶ್ರಾವಕ ಶ್ರಾವಿಕಿಯರು ಇದ್ದರು.