ಚೆನ್ನೈ: ಶಾಲಾ ಬಸ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವನಪ್ಪಿದ್ದು, ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಕುಪ್ಪಂ ಬಳಿಯ ರೈಲ್ವೆ ಹಳಿಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ವಿಲ್ಲುಪುರಂನಿಂದ ಮೈಲಾಡುತುರೈಗೆ ಸಂಚರಿಸುತ್ತಿದ್ದ ಟ್ರೈನ್ ನಂ. 56813 (ವಿಲ್ಲುಪುರಂ-ಮೈಲಾಡುತುರೈ ಪ್ಯಾಸೆಂಜರ್ ರೈಲು) ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಶಾಲಾ ಬಸ್ ಚಾಲಕನು ಸಮೀಪಿಸುತ್ತಿದ್ದ ರೈಲನ್ನು ಗಮನಿಸದೆ, ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.
ಡಿಕ್ಕಿಯ ತೀವ್ರತೆಯಿಂದಾಗಿ ಬಸ್ ಹಲವು ಅಡಿ ದೂರಕ್ಕೆ ಹಾರಿ ಛಿದ್ರಗೊಂಡಿದೆ. ರೈಲು ಡಿಕ್ಕಿಯಾದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದ್ದು, ಹಲವಾರು ಅಡಿಗಳಷ್ಟು ದೂರ ಹೋಗಿ ಬಿದ್ದಿದೆ. ಈ ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದು, ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ರೈಲ್ವೇ ಕ್ರಾಸಿಂಗ್‌ನಲ್ಲಿದ್ದ ಗೇಟ್‌ಕೀಪರ್ ನಿದ್ರಿಸುತ್ತಿದ್ದ. ಸಮಯಕ್ಕೆ ಸರಿಯಾಗಿ ಗೇಟ್ ಮುಚ್ಚದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.