Namma Metro: ಶುಭ ಸುದ್ದಿ, ಹಳದಿ ಮಾರ್ಗದ ಸಿಎಂಆರ್‌ಎಸ್‌ ಪರಿಶೀಲನೆ ಶುರು

0
188

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಶುಭ ಸುದ್ದಿ ನೀಡಿದೆ. ನಗರದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಅಂತಿಮ ಪರೀಕ್ಷೆಗಳು ಪ್ರಾರಂಭವಾಗಿದೆ.

ಈ ಕುರಿತು ನಮ್ಮ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಮಾಹಿತಿ ನೀಡಿದ್ದು, ಚಿತ್ರಗಳನ್ನು ಹಂಚಿಕೊಂಡಿದೆ. ನಮ್ಮ ಮೆಟ್ರೋ ರೀಚ್-5 ಮಾರ್ಗದಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಪರಿಶೀಲನೆ ಪ್ರಾರಂಭಿಸಿದ್ದಾರೆ.

ಈ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ನಗರದ ಸಾಫ್ಟ್‌ವೇರ್ ಕಂಪನಿಗಳು ಇರುವ ಎಲೆಕ್ಟ್ರಾನಿಕ್ ಸಿಟಿಗೆ ಈ ಮೂಲಕ ನಮ್ಮ ಮೆಟ್ರೋ ರೈಲು ಸಂಪರ್ಕ ಸಿಗಲಿದೆ. ಆಗಸ್ಟ್‌ನಲ್ಲಿ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ.

ಜುಲೈ 24ರ ತನಕ ಪರಿಶೀಲನೆ: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಜುಲೈ 24ರ ತನಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಲಿದ್ದಾರೆ. ಜುಲೈ 25ರಂದು ಆಯುಕ್ತರ ತಂಡ ಆಪರೇಷನ್ ಕಂಟ್ರೋಲ್ ಸೆಂಟರ್ (ಒಸಿಸಿ)ಗೆ ಭೇಟಿ ನೀಡಲಿದೆ.

ಸುಮಾರು ಒಂದು ವರ್ಷದ ಹಿಂದೆಯೇ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಮುಕ್ತಾಯಗೊಂಡಿತ್ತು. ಆದರೆ ರೈಲುಗಳ ಕೊರತೆ ಕಾರಣ ಇನ್ನೂ ಸಹ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಿಲ್ಲ.

ಉದ್ಯಾನ ನಗರಿ ಬೆಂಗಳೂರು ನಗರದ ಬಹು ನಿರೀಕ್ಷಿತ ರೈಲು ಮಾರ್ಗ ಇದಾಗಿದೆ. ನಗರದಲ್ಲಿ ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ರೈಲು ಸಂಚಾರವನ್ನು ನಡೆಸುತ್ತಿದೆ. ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ ಸುಮಾರು 3 ಲಕ್ಷ ಜನರು ಸಂಚಾರವನ್ನು ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಹಳದಿ ಮಾರ್ಗ ಸುಮಾರು 18 ಕಿ. ಮೀ. ಇದ್ದು 16 ನಿಲ್ದಾಣಗಳಿವೆ. ಈ ಮಾರ್ಗದ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಐಟಿ ಕಂಪನಿಗಳು ಅನುದಾನವನ್ನು ನೀಡಿವೆ. ಈ ಮಾರ್ಗದಿಂದ ಟೆಕ್ಕಿಗಳಿಗೆ ಉಪಯೋಗವಾಗಲಿದ್ದು, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹಳದಿ ಮಾರ್ಗದಲ್ಲಿ ಆಗಸ್ಟ್ 15ರಿಂದ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಾರ್ಗವನ್ನು ಲೋಕಾರ್ಪಣೆಗೊಳಿಸುವ ನಿರೀಕ್ಷೆ ಇದೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ಪರಿಶೀಲನೆ ರೈಲು ಓಡಿಸಲು ಬೇಕಾದ ಅಂತಿಮ ಹಂತವಾಗಿದೆ. ಆಯುಕ್ತರು ಪರಿಶೀಲನೆ ಬಳಿಕ ರೈಲುಗಳ ವಾಣಿಜ್ಯ ಸಂಚಾರಕ್ಕೆ ಪ್ರಮಾಣ ಪತ್ರವನ್ನು ನೀಡಲಿದ್ದಾರೆ. ಬಳಿಕ ಬಿಎಂಆರ್‌ಸಿಎಲ್ ಕೇಂದ್ರ, ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿ, ರೈಲು ಸಂಚಾರದ ದಿನಾಂಕವನ್ನು ಘೋಷಣೆ ಮಾಡಲಿದೆ.

ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ಕುರಿತು ಬಿಎಂಆರ್‌ಸಿಎಲ್ ನೀಡಿರುವ ಹಲವು ಗಡುವು ಮುಕ್ತಾಯಗೊಂಡಿದೆ. 2025ರ ಜನವರಿಯಲ್ಲಿಯೇ ಮಾರ್ಗದಲ್ಲಿ ರೈಲು ಸಂಚಾರ ಮಾಡಲಾಗುತ್ತದೆ ಎಂದು ಈ ಹಿಂದೆ ಹೇಳಿತ್ತು.

ಬೆಂಗಳೂರು ನಗರದ ಜನಪ್ರತಿನಿಧಿಗಳು, ಟೆಕ್ಕಿಗಳು, ವಿವಿಧ ಸಂಘಟನೆಗಳವರು ಹಳದಿ ಮಾರ್ಗದಲ್ಲಿ ರೈಲು ಸಂಚಾರವನ್ನು ತಕ್ಷಣ ಆರಂಭಿಸಬೇಕು ಎಂದು ಬಿಎಂಆರ್‌ಸಿಎಲ್‌ ಮೇಲೆ ಒತ್ತಡವನ್ನು ಹಾಕುತ್ತಲೇ ಇದ್ದಾರೆ.

ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ರೈಲು ಸಂಚಾರವನ್ನು ನಡೆಸಲಿದೆ. ಅಲ್ಲದೇ ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸಿದೆ.

Previous articleಕಾಡಿನೊಳಗೆ ದನ, ಕುರಿ ಮೇಯಿಸುವಂತಿಲ್ಲ!
Next articleಜಿಎಸ್‌ಟಿ ನೋಟಿಸ್: 3 ದಿನ ಹಾಲು, ಮೊಸರು ಮಾರಾಟವಿಲ್ಲ

LEAVE A REPLY

Please enter your comment!
Please enter your name here