ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಯೋಜನೆಗೆ ಸಿಗುವ ಭೂಮಿಯ ವಿಚಾರದಲ್ಲಿ ಈಗ ಚರ್ಚೆಗಳು ಪ್ರಾರಂಭವಾಗಿದೆ. ಹೆಬ್ಬಾಳದಲ್ಲಿ 45 ಎಕರೆ ಬದಲು ಕೇವಲ 9 ಎಕರೆ ಜಾಗ ಮೆಟ್ರೋಗೆ ಸಿಗಲಿದೆ. ಸರ್ಕಾರ ರಿಯಲ್ ಎಸ್ಟೇಟ್ ಒತ್ತಡಕ್ಕೆ ಮಣಿದು ಕಡಿಮೆ ಭೂಮಿಯನ್ನು ನೀಡುತ್ತಿದೆಯೇ? ಎಂದು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ಹಬ್ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಯೋಜನೆಗೆ 45 ಎಕರೆ ಜಾಗ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಯೋಜನೆಯನ್ನು ಪರಿಷ್ಕರಣೆ ಮಾಡಿ, ಭೂಮಿಯನ್ 9 ಎಕರೆಗೆ ಇಳಿಕೆ ಮಾಡಿದೆ.
ಕೇಂದ್ರ ಸಚಿವರ ಪತ್ರ: ಈ ವಿಚಾರದ ಕುರಿತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ.
ಸಚಿವರು ಪತ್ರದಲ್ಲಿ ಹೆಬ್ಬಾಳದಲ್ಲಿ ಬಿಎಂಆರ್‌ಸಿಎಲ್‌ಗೆ 45 ಎಕರೆ ಭೂಮಿಯನ್ನು ಮಂಜೂರು ಮಾಡುವ ಬದಲು ಕೇವಲ 9 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಭವಿಷ್ಯದ ಅಗತ್ಯಗಳಿಗೆ ಪ್ರಮುಖ ಪರಿಹಾರವಾದ ವಿಶ್ವ ದರ್ಜೆಯ ʼಬಹು ಮಾದರಿ ಸಾರಿಗೆ ಕೇಂದ್ರʼವನ್ನು ನಿರ್ಮಿಸಲು ಈ ಭೂಮಿ ಅತ್ಯಂತ ಅವಶ್ಯಕವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೇಡಿಕೆಯನುಸಾರ ಪೂರ್ಣ ಭೂಮಿ ನೀಡಲು ನಿರಾಕರಿಸುವುದರಿಂದ ಪ್ರಮುಖ ಮೂಲಸೌಕರ್ಯ ಯೋಜನೆಯು ಹಳಿತಪ್ಪುವ ಮತ್ತು ಬೆಂಗಳೂರು ಉತ್ತರ ಭಾಗದ ಬೆಳವಣಿಗೆ ಸ್ಥಗಿತಗೊಳ್ಳುವ ಅಪಾಯವಿದ್ದು, ಸ್ಥಾಪಿತ ಲಾಬಿಗಳ ಒತ್ತಡಕ್ಕಿಂತ ಸಾರ್ವಜನಿಕ ಹಿತಾಸಕ್ತಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಕುರಿತು ನೋಡುವುದಾದರೆ ಬಹು ಹಂತದ ಪಾರ್ಕಿಂಗ್, ಡಿಪೋ ಸೇರಿದಂತೆ ಅತ್ಯಾಧುನಿಕ ಸಾರಿಗೆ ಹಬ್ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಇದಕ್ಕಾಗಿ 45 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನ ಪಡಿಸಿಕೊಂಡು ಬಿಎಂಆರ್‌ಸಿಎಲ್‌ಗೆ ನೀಡಬೇಕು ಎಂದು 2024ರ ಮಾರ್ಚ್‌ನಲ್ಲಿ ಬಿಎಂಆರ್‌ಸಿಎಲ್ ಮನವಿ ಮಾಡಿತ್ತು.
ಲೇಕ್ ವ್ಯೂ ಎಂಬ ಕಂಪನಿ ಯೋಜನೆಯೊಂದಕ್ಕೆ ಅನೇಕ ವರ್ಷಗಳ ಹಿಂದೆ ಹೆಬ್ಬಾಳದಲ್ಲಿ 55.1 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇದರಲ್ಲಿ 45 ಎಕರೆ ಜಾಗವನ್ನು ಬಿಎಂಆರ್‌ಸಿಎಲ್‌ಗೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಈ ಕುರಿತು ಪ್ರಕ್ರಿಯೆ ನಿಧಾನವಾಗಿತ್ತು.
ಈ ಜಾಗದಲ್ಲಿ ನಿರ್ಮಾಣವಾಗುವ ಬಹು ಮಾದರಿ ಸಾರಿಗೆ ಹಬ್ ಮೂರು ಮೆಟ್ರೋ ಮಾರ್ಗ(ನೀಲಿ, ಕಿತ್ತಳೆ ಮತ್ತು ಕೆಂಪು) ಇಂಟರ್‌ಚೇಂಜ್ ಆಗಿ, ಉಪನಗರ ರೈಲು ನಿಲ್ದಾಣದ ಜೊತೆಗೆ ಸಂಪರ್ಕನ್ನು ಕಲ್ಪಿಸುತ್ತದೆ. ಆದ್ದರಿಂದ ಇದೊಂದು ಪ್ರಮುಖ ಯೋಜನೆಯಾಗಿದ್ದು, ಹೆಚ್ಚಿನ ಭೂಮಿ ಅಗತ್ಯವಿದೆ.
ಬೆಂಗಳೂರು ನಗರದ ಮೂವರು ಸಂಸದರು, ವಿವಿಧ ಸಂಘಟನೆಗಳು ಉದ್ದೇಶಿತ ಯೋಜನೆಗೆ ಸರ್ಕಾರ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದರು. ಈಗ 45ರ ಬದಲು 9 ಎಕರೆ ಭೂಮಿ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.