ನವದೆಹಲಿ : ಬಿಹಾರದಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಮಹಾಘಟಬಂಧನ್ ಮೈತ್ರಿಕೂಟ ಬುಧವಾರ ‘ಬಿಹಾರ ಬಂದ್’ಗೆ ಕರೆ ನೀಡಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಂದ್‌ನಲ್ಲಿ ಪಾಲ್ಗೊಂಡಿದ್ದಾರೆ. ನವೆಂಬರ್ ಅಥವ ಡಿಸೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ.
ಬಿಹಾರ ಬಂದ್‌ನಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಬುಧವಾರ ಬೆಳಗ್ಗೆ ಪಾಟ್ನಾಕ್ಕೆ ಆಗಮಿಸಿದರು. ರಾಹುಲ್ ಗಾಂಧಿ, ಆರ್‌ಜೆಡಿಯ ತೇಜಸ್ವಿ ಯಾದವ್ ಹಾಗೂ ವಿರೋಧ ಪಕ್ಷದ ನಾಯಕರು ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಣೆ ಮಾಡಲಾಗಿದೆ.
ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಮೂಲಕ ವಲಸಿಗರು, ದಲಿತರು, ಮಹಾದಲಿತರು ಮತ್ತು ಬಡ ಮತದಾರರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.
ಮೂರು ತಿಂಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ಈ ಹೋರಾಟವನ್ನು ನಡೆಸುತ್ತಿವೆ. ಆಯೋಗದ ಅಭಿಯಾನವು ‘ಮತಗಳನ್ನು ನಿರ್ಬಂಧಿಸುವ ಪಿತೂರಿ’ ಎಂದು ವಿರೋಧ ಪಕ್ಷಗಳು ದೂರಿವೆ.
ಆರ್‌ಜೆಡಿಯ ವಿದ್ಯಾರ್ಥಿ ಘಟಕವು ಜೆಹಾನಾಬಾದ್‌ನಲ್ಲಿ ರೈಲು ಹಳಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ-82 ಅನ್ನು ತಡೆದು ಪ್ರತಿಭಟನೆ ನಡೆಸಿದೆ. ದರ್ಭಾಂಗದಲ್ಲಿ ಆರ್‌ಜೆಡಿ ಕಾರ್ಯಕರ್ತರು ನಮೋ ಭಾರತ್ ರೈಲನ್ನು ಸಹ ತಡೆದಿದ್ದಾರೆ.
ಯಾರದೋ ಅಜೆಂಡಾದಂತೆ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗದ ವಿರುದ್ಧ ನಾವು ಈ ಬಂದ್‌ಗೆ ಕರೆ ನೀಡಿದ್ದೇವೆ. ಜನರು ಈ ಸರ್ಕಾರದಿಂದ ಬೇಸತ್ತಿದ್ದಾರೆ. ಆರ್‌ಜೆಡಿ ಮತ್ತು ಇಡೀ ಇಂಡಿಯಾ ಮೈತ್ರಿಕೂಟ ಬಂದ್‌ಗೆ ಕರೆ ನೀಡಿದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.
ಮಹಾರಾಷ್ಟ್ರ ಚುನಾವಣೆ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಕುರಿತು ಈಗಾಗಲೇ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕರು ಬಿಹಾರ್ ಬಂದ್ ಯಶಸ್ವಿಗೊಳಿಸಬೇಕು ಎಂದು ಪಣತೊಟ್ಟಿದ್ದಾರೆ. ಆದ್ದರಿಂದಲೇ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪಾಟ್ನಾ ಮಾತ್ರವಲ್ಲ ಎಲ್ಲಾ ಜಿಲ್ಲಾ ಕೇಂದ್ರದಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಪಾಟ್ನಾದಲ್ಲಿ ರಾಹುಲ್ ಮತ್ತು ತೇಜಸ್ವಿ ಯಾದವ್ ಆದಾಯ ತೆರಿಗೆ ವೃತ್ತದಿಂದ ವೀರಚಂದ್ ಪಟೇಲ್ ಮಾರ್ಗ ಮತ್ತು ಶಹೀದ್ ಸ್ಮಾರಕ್ ಮೂಲಕ ಚುನಾವಣಾ ಆಯೋಗದ ಕಚೇರಿಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಸಾಗಲಿದ್ದಾರೆ.