ಬುಧವಾರ ಭಾರತ್ ಬಂದ್: ಬ್ಯಾಂಕ್, ಬಸ್, ಆಟೋ, ರೈಲು ಸೇವೆ ಸಿಗಲಿದೆಯೇ?

ನವದೆಹಲಿ: ದೇಶಾದ್ಯಂತ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಭಾರತ್ ಬಂದ್ ನಡೆಯಲಿದ್ದು, ಸಾರಿಗೆ ಸಂಚಾರ ಸೇರಿದಂತೆ ಅಗತ್ಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆಯೇ? ಎಂಬುದು ಪ್ರಶ್ನೆಯಾಗಿದೆ.

ವಿಮೆ, ಕಲ್ಲಿದ್ದಲು, ಬ್ಯಾಂಕಿಂಗ್, ಹೆದ್ದಾರಿ ಮತ್ತು ನಿರ್ಮಾಣ ವಲಯದ ಕಾರ್ಮಿಕರು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಸಹವರ್ತಿ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಕಾರ್ಮಿಕರು ಮುಂದಾಗಿದ್ದಾರೆ.

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ರೈತ ವಿರೋಧಿಯಾಗಿ ಕಾರ್ಪೋರೇಟ್‌ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಕಾರ್ಮಿಕ ಸಂಘಟನೆಗಳು ಸಹ ಈ ಬಂದ್‌ಗೆ ಬೆಂಬಲವನ್ನು ಘೋಷಣೆ ಮಾಡಿವೆ.

ಕಾರ್ಮಿಕರ 10 ಸಂಘಟನೆಗಳು ಅವುಗಳ ಸಹವರ್ತಿ ಸಂಘಟನೆಗಳ ವೇದಿಕೆಯು ಈ ಬಂದ್‌ಗೆ ಕರೆ ಕೊಟ್ಟಿದೆ. ಈ ವೇದಿಕೆ ಕೇಂದ್ರ ಕಾರ್ಮಿಕ ಸಚಿವ ಮುನ‌ಸುಖ್‌ ಮಾಂಡವೀಯ ಅವರಿಗೆ ಕಳೆದ ವರ್ಷ 17 ಅಂಶಗಳ ಬೇಡಿಕೆ ಸಲ್ಲಿಕೆ ಮಾಡಿತ್ತು. ಆದರೆ ಈ ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ಆರೋಪಿಸಲಾಗಿದೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವೇದಿಕೆಯು ದೂರಿದೆ. ಆದರೆ ಈ ಪ್ರತಿಭಟನೆಯಲ್ಲಿ ಎಷ್ಟು ವಲಯಗಳ ಕಾರ್ಮಿಕರು ಕೆಲಸ ನಿಲ್ಲಿಸಿ ಹಾಜರಾಗುತ್ತಾರೆ? ಎಂಬುದು ಖಚಿತವಾಗಿಲ್ಲ.

ಬುಧವಾರ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆ ಇರಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಕೆಲವು ಆಟೋ ಚಾಲಕರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು. ನಮ್ಮ ಮೆಟ್ರೋ, ಏರ್‌ಪೋರ್ಟ್‌ ಕ್ಯಾಬ್‌ಗಳು ಸಂಚಾರವನ್ನು ನಡೆಸಲಿವೆ. ಓಲಾ, ಊಬರ್‌, ಟ್ಯಾಕ್ಸಿ ಚಾಲಕರ ಸಂಘ ಕ್ಯಾಬ್ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

ಶಾಲಾ-ಕಾಲೇಜುಗಳು ತೆರೆದಿರುತ್ತವೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಹಾಲು, ತರಕಾರಿಗಳು ಸಿಗಲಿವೆ. ಖಾಸಗಿ ಬಸ್ ಮಾಲೀಕರು ಪ್ರತಿಭಟನೆಗೆ ಬೆಂಬಲ ಘೋಷಣೆ ಮಾಡಿಲ್ಲ. ರೈಲು ಸಂಚಾರ ಎಂದಿನಂತೆ ಇರಲಿದೆ. ಬ್ಯಾಂಕಿಂಗ್ ಕ್ಷೇತ್ರದ ಕೆಲವು ಸಂಘಟನೆಗಳು ಬಂದ್‌ ಬೆಂಬಲಿಸಿದ್ದು, ಬ್ಯಾಂಕ್ ಸೇವೆಯಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆ ಇದೆ.

ಭಾರತ್‌ ಬಂದ್‌ಗೆ ಇಂಡಿಯನ್ ನ್ಯಾಷನಲ್ ಟ್ರೇಡ ಯೂನಿನ್ ಕಾಂಗ್ರೆಸ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಹಿಂದ್ ಮಜ್ದೂರ್‌ ಸಭಾ, ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್, ಆಲ್ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್ ಕಾಂಗ್ರೆಸ್ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.

10 ವರ್ಷಗಳಿಂದ ಭಾರತೀಯ ಕಾರ್ಮಿಕರ ಸಮ್ಮೇಳನವನ್ನು ನಡೆಸಿಲ್ಲ, ಕೇಂದ್ರ ಸರ್ಕಾರ ಗುತ್ತಿಗೆ ನೇಮಕಾತಿಯನ್ನು ಪ್ರೋತ್ಸಾಹಿಸುತ್ತಿದೆ, ನಿರುದ್ಯೋಗ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಂಡಿಲ್ಲ, ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವೆಚ್ಚವನ್ನು ಸರ್ಕಾರ ಕಡಿತಗೊಳಿಸಿದೆ ಎಂದು ಆರೋಪಿಸಲಾಗಿದೆ.