27ರಿಂದ ಮೂರು ದಿನ ಬಿವಿಬಿ ಅಮೃತ ಘಳಿಗೆ

0
24

ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಜ. 27ರಿಂದ 29ರವೆರೆಗೆ ನಡೆಯಲಿದೆ. ಕ್ರಮವಾಗಿ ಮುಂಬೈ ವಿವಿ, ಕರ್ನಾಟಕ ವಿವಿ ಹಾಗೂ ವಿಟಿಯು ಅಧೀನದಲ್ಲಿದ್ದ ಈ ಕಾಲೇಜು ಈಗ ಸ್ವತಂತ್ರ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ (ಕೆಎಲ್‌ಇ ಟೆಕ್) ಪ್ರಮುಖ ಶಿಕ್ಷಣ ಸಂಸ್ಥೆ.
ಅಮೃತೋತ್ಸವ ಭಾಗವಾಗಿ ಕಾರ್ಯಕ್ರಮದ ಮೊದಲ ದಿನ ಡಾ. ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣ' ಉದ್ಘಾಟನೆಯಾಗಲಿದೆ. ಇದು ಉತ್ತರ ಕರ್ನಾಟಕದ ಮೊಟ್ಟ ಮೊದಲ ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣವಾಗಿದೆ. ವಿದ್ಯಾನಗರದಲ್ಲಿರುವ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯ ಆವರಣದಲ್ಲಿ (ಎಂ.ಆರ್. ಸಾಖರೆ ಮೈದಾನ) ಅಮೃತ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷರೂ ಆದ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದೇಶ ವಿದೇಶಗಳಲ್ಲಿರುವ ಎಲ್ಲ ಹಳೆಯ ವಿದ್ಯಾರ್ಥಿಗಳು ಹಾಗೂ ರಾಜ್ಯದ ಗಣ್ಯರು ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜ. 27ರಂದು ಡಾ. ಪ್ರಭಾಕರ ಕೋರೆಯವರಿಗೆ ಅಭಿನಂದನಾ ಸಮಾರಂಭದೊಂದಿಗೆ ಅಮೃತ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಕುಲಪತಿ ಡಾ. ಅಶೋಕ ಶೆಟ್ಟರ ಹಾಗೂ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು. ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸೇರಿದಂತೆ ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. ೨೮ರಂದು ಅಮೃತ ಮಹೋತ್ಸವದ ಪ್ರಧಾನ ಸಮಾರಂಭ ಏರ್ಪಾಡಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇದನ್ನು ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಬಿವಿಬಿ ಹಳೆಯ ವಿದ್ಯಾರ್ಥಿಗಳೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೆಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೂ ಆಗಿರುವ ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಮೇಲ್ಮನೆ ಸ್ಪೀಕರ್ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅತಿಥಿಗಳಾಗಿ ಭಾಗವಹಿಸುವರು. ತಿರುಪತಿಯ ವಿಶ್ವಧರ್ಮ ಚೇತನ ಸಂಸ್ಥೆಯ ಧರ್ಮಶ್ರೀ ಗುರುದೇವ ಸಾನ್ನಿಧ್ಯ ವಹಿಸುವರು. ಜ. 28ರ ಮಧ್ಯಾಹ್ನ 2.30ಕ್ಕೆ ಬಿವಿಬಿ ಹಳೆಯ ವಿದ್ಯಾರ್ಥಿಗಳ ಸಮಾವೇಶ ಆರಂಭವಾಗಲಿದ್ದು, ಇದು ನೂತನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಡಾ. ಸುಧಾಮೂರ್ತಿ ಇದರ ಅಧ್ಯಕ್ಷತೆ ವಹಿಸಲಿದ್ದು, ವಿಶ್ವದೆಲ್ಲೆಡೆಯಿಂದ ಸುಮಾರು 600 ಹಳೆಯ ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ. ಜ. 29ರಂದು ಸಮಾರೋಪದ ಭಾಗವಾಗಿ ತಂತ್ರಜ್ಞರ ಸಮಾವೇಶ ನಡೆಯುತ್ತದೆ. ಪ್ರಸಿದ್ಧಥ್ರೀ ಈಡಿಯಟ್ಸ್’ ಚಿತ್ರಕ್ಕೆ ಪ್ರೇರಣೆಯಾಗಿದ್ದ ಈಶಾನ್ಯ ಭಾರತದ ಹೊಸತನದ ಸಂಶೋಧಕ ಸೋನಮ್ ವಾಂಗ್ಚುಕ್ ಅವರೊಂದಿಗೆ ಸಂವಾದ ಸಮಾರೋಪದ ಮುಖ್ಯ ಭಾಗ. ಕಾರ್ಯಕ್ರಮಗಳು ಡಾ. ಪ್ರಭಾಕರ ಕೋರೆ ಅಧ್ಯಕ್ಷತೆಯಲ್ಲಿ ನಡೆಯುತ್ತವೆ. ಅವಳಿನಗರದ ಎಲ್ಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಹ್ವಾನಿತ ಗಣ್ಯರಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

BVB
Previous articleಪಠಾಣ ಚಲನಚಿತ್ರ ಪ್ರದರ್ಶನಕ್ಕೆ ವಿರೋಧ
Next article28ರಂದು ರಾಜ್ಯಕ್ಕೆ ಶಾ ಭೇಟಿ: ಕೇಸರಿ ಪಡೆಯ ಹೈವೋಲ್ಟೇಜ್ ಸಭೆ