ಧಾರವಾಡ: ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಹೊತ್ತು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಧಾರವಾಡದ ಕಲಘಟಗಿ ರಸ್ತೆಯಲ್ಲಿನ ಪುರೋಹಿತ ನಗರದಲ್ಲಿ ಈ ಘಟನೆ ನಡೆದಿದೆ.
ಮೃತಪಟ್ಟ ಯುವತಿಯನ್ನು ಕೃಷಿ ಪದವೀಧರೆ ಜೀವಿತಾ ಪ್ರಭಾಕರ ಕುಸಗೂರ (26) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮನೆಯಲ್ಲಿದ್ದ ಜೀವಿತಾಗೆ ಎದೆ ನೋವು ಕಾಣಿಸಿಕೊಂಡಿತ್ತು. ತೀವ್ರ ಎದೆನೋವಿನ ಕಾರಣ ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಅಷ್ಟರೊಳಗೆ ಜೀವಿತಾ ಮೃತಪಟ್ಟಿದ್ದಳು. ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಜೀವಿತಾ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಜೀವಿತಾಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದಲ್ಲಿ ಹೃದಯಾಘಾತದ ಪ್ರಕರಣಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರುತು ಅಧ್ಯಯನ ನಡೆಸಲು ಸರ್ಕಾರ ತಜ್ಞ ವೈದ್ಯರ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ಗೆ ಅಧ್ಯಯನ ವರದಿಯನ್ನು ಸೋಮವಾರ ಸಲ್ಲಿಕೆ ಮಾಡಿತ್ತು.
ಹೃದಯಾಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವುದು. ಹೃದಯಾಘಾತದಿಂದ ಸಂಭವಿಸಿದ ಸಾವುಗಳ ಮರಣೋತ್ತರ ಪರೀಕ್ಷೆ ನಡೆಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಸಮಿತಿ ವರದಿಯಲ್ಲಿ ಸಲ್ಲಿಸಿತ್ತು.