ಪ್ರತಿಪಕ್ಷಗಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡನೆ ಮಾಡಿರುವ ನಡುವಲ್ಲೇ 2019ರಲ್ಲಿ ಮೋದಿಯವರು ಪ್ರತಿಪಕ್ಷಗಳ ಕುರಿತು ಲೋಕಸಭೆಯಲ್ಲಿ ಭಾಷಣ ಮಾಡಿದ್ದ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದು ಮೋದಿ ಅವರು ನುಡಿದಿದ್ದ ‘ಭವಿಷ್ಯ’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
2019ರ ಫೆಬ್ರವರಿ 7ರಂದು ಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ಕುರಿತಾದ ಚರ್ಚೆ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ, “ನಿಮಗೆ ನಾನು ಶುಭ ಹಾರೈಸಲು ಬಯಸುತ್ತೇನೆ… ಸಾಕಷ್ಟು ತಯಾರಿ ಮಾಡಿಕೊಳ್ಳಿ. 2023ರಲ್ಲಿ ಇನ್ನೊಮ್ಮೆ ನಿಮಗೆ ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶ ಸಿಗಲಿದೆ” ಎಂದು ಹೇಳಿದ್ದರು. ಇದನ್ನು ಆಡಳಿತಾರೂಢ ಸಂಸದರು ಜೋರಾಗಿ ನಗುತ್ತಾ, ಮೇಜು ತಟ್ಟಿ ಅನುಮೋದಿಸಿದ್ದರು.