ಮಂಗಳೂರು: ಕೇಂದ್ರ ವೆಬ್‌ಸೈಟ್ ಹ್ಯಾಕ್ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನೃತ್ಯ ಮಾಡಲು ಬಾರದವ ಅಂಗಳ ಡೊಂಕು ಅಂದನಂತೆ’ ಈ ಗಾದೆಯಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ ಎಂದು ವ್ಯಂಗ್ಯವಾಡಿದರು.
ಎಲ್ಲಾ ಆರೋಪಗಳ ನಂತರ ಈಗ ಹ್ಯಾಕ್ ಆರೋಪ ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರ ಇಂತಹ ಕೆಲಸ ಮಾಡುವುದಿಲ್ಲ. ಇದು ಕಾಂಗ್ರೆಸ್ ವಿಫಲತೆ, ಯಾವುದೇ ಹ್ಯಾಕ್ ಕೇಂದ್ರ ಸರ್ಕಾರ ಮಾಡುವುದಿಲ್ಲ. ಇವರ ಸರ್ಕಾರವೇ ಹ್ಯಾಕ್ ಮಾಡಿರಬಹುದು ಎಂದರು.
ಬಿಜೆಪಿ ಕೈಯಲ್ಲಿರುವ ಪಾಲಿಕೆ ಹಾಗೂ ಬೇರೆ ಆಡಳಿತದಲ್ಲಿ ಇವರಿಗೆ ಹ್ಯಾಕ್ ಮಾಡಲು ಆಗುತ್ತಾ ? ಆರೋಪವನ್ನು ಎಲ್ಲರೂ ಹಾಕಬಹುದು, ಇವರಿಗೆ ನೈತಿಕತೆ ಇಲ್ಲ, ನೈತಿಕತೆ ಇದ್ದರೆ ಜನರಿಗೆ ಹತ್ತು ಕೆ.ಜಿ ಅಕ್ಕಿ ಕೊಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಬಿಟ್ಟಿ ಭಾಗ್ಯ ಘೋಷಿಸಿ ಅದನ್ನು ಪೂರೈಸಲು ವ್ಯವಸ್ಥೆ ಮಾಡಿಲ್ಲ. ತನ್ನ ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಹತ್ತು ವರ್ಷಗಳಲ್ಲಿ ೫ ಕೆ.ಜಿ.ಅಕ್ಕಿ ನೀಡುವ ಕೆಲಸ ಮಾಡಿದೆ, ಈ ಹಿಂದೆ ಸಿದ್ದರಾಮಯ್ಯ ಇದ್ದಾಗಲೂ ರೂ. ೨೭ ಕೇಂದ್ರ ಸರ್ಕಾರ ನೀಡಿ, ಮೂರು ರೂಪಾಯಿ ಮಾತ್ರ ರಾಜ್ಯ ಸರ್ಕಾರ ನೀಡಿದರೂ ಭಾವಚಿತ್ರ ಸಿದ್ದರಾಮಯ್ಯರದ್ದೇ ಇತ್ತು ಎಂದರು.
ಚುನಾವಣೆ ಬಂದಾಗ ಪ್ರಣಾಳಿಕೆಯಲ್ಲಿ ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು, ಈಗ ಅಕ್ಕಿ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಘೋಷಣೆ ಮಾಡುವಾಗ ಕೇಂದ್ರ ಸರ್ಕಾರ ಕೊಟ್ಟರೆ ಮಾತ್ರ ಕೊಡುತ್ತೇವೆ ಎಂದು ಹೇಳಿದ್ದಾರಾ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ನ ಹೋರಾಟಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಭರವಸೆಯಂತೆ ಅಕ್ಕಿ ನೀಡಲು ಆಗದ್ದಕ್ಕೆ ಕಾಂಗ್ರೆಸ್ ವಿರುದ್ದವೇ ಪ್ರತಿಭಟನೆ ಮಾಡಿದ್ದಾರೆ, ಇವರ ಸರ್ಕಾರದ ವಿರುದ್ದ ಮಾಡುವ ಪ್ರತಿಭಟನೆ ಮೂರ್ಖತನದದು ಎಂದರು.
ಕೇಂದ್ರ ಸರ್ಕಾರ ಯಾವುದೇ ಅಕ್ಕಿ ಕಡಿತ ಮಾಡಿಲ್ಲ. ಇಲ್ಲಿ ಮಾತ್ರ ನಮ್ಮ ವಿರೋಧ ಪಕ್ಷದ ಸರ್ಕಾರ ಇಲ್ಲ, ಕೆಲವು ರಾಜ್ಯದಲ್ಲಿ ಇದೆ. ಎಲ್ಲೂ ಕೇಂದ್ರ ಸರ್ಕಾರ ಇಂಥಹದ್ದನ್ನು ಮಾಡಿಲ್ಲ, ಸಿದ್ದರಾಮಯ್ಯ ಸುಮ್ಮನೆ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.