ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಕೇಂದ್ರ ಸರ್ಕಾರದಿಂದ 273 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅನುದಾನ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಉತ್ತರ ಕರ್ನಾಟಕದ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಮಾನ ನಿಲ್ದಾಣದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಪ್ರಸ್ತಾವನೆಗೆ ಸರ್ಕಾರ ಶೀಘ್ರವಾಗಿ ಸ್ಪಂದಿಸಿದೆ. ಟರ್ಮಿನಲ್‌ನ ನೆಲಮಹಡಿ ಮತ್ತು ಮೊದಲ ಮಹಡಿಯನ್ನು 20,000 ಚದರ ಮೀಟರ್‌ಗೆ ವಿಸ್ತರಣೆ ಮಾಡಲಾಗುವುದು. ಇದರಿಂದ ಏಕಕಾಲಕ್ಕೆ 1,400ಕ್ಕೂ ಅಧಿಕ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಬಹುದು. ವಿಸ್ತರಣೆ ಕಾಮಗಾರಿ ಜನವರಿಯಲ್ಲಿ ಆರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.