ಧಾರವಾಡ: ಈ ಹಿಂದೆ ಆಪರೇಶನ್ ಕಮಲ ಮಾಡಿದವರಿಗೆ ನವರಂಗಿ ಆಟ, ನಾಚಿಕೆ ಆಗಿಲ್ಲವೇ? ಇದೀಗ ಬಿಜೆಪಿಗರಿಗೆ ನವರಂಗಿ ಆಟ ಕಾಣುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಬಿಜೆಪಿ ಮುಖಂಡ ಸಿ.ಟಿ. ರವಿ ಆರೋಪಕ್ಕೆ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನಮ್ಮ ಸರ್ಕಾರ ಬೀಳುತ್ತದೆ ಎಂಬ ಚಿಂತೆ ಇಲ್ಲ. ಬಿಜೆಪಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂಬ ಚಿಂತೆ ಇದೀಗ ಬಿಜೆಪಿಗರಿಗೆ ಆರಂಭವಾಗಿದೆ ಎಂದರು.
ಬಿಜೆಪಿ ಶಾಸಕರಿಗೆ ಈಗಾಗಲೇ ಬಿಜಿಪಿಯಲ್ಲಿದ್ದರೆ ಏನೂ ಆಗುವುದಿಲ್ಲ ಎಂದು ತಿಳಿದಿದೆ. ಎಷ್ಟು ಜನ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ.ನಮ್ಮ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರುವ ವೇಳೆ ಮಾಧ್ಯಮಗಳಿಗೆ ಹೇಳಿಯೇ ಸೇರ್ಪಡೆಗೊಳಿಸಿಕೊಳ್ಳುತ್ತೆವೆ ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲ ಘೋಷಣೆ ಕುರಿತು ಇಲಾಖೆ ಮಂತ್ರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತಾರೆ. ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಬರಗಾಲ ಘೋಷಣೆ ಕುರಿತು ಸಿಎಂ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.


























