ಉಡುಪಿ: ‘ಸನ್ಮಾನ್ಯ ಸಿದ್ದರಾಮಯ್ಯನವರೇ, ಈಗಲಾದರೂ ಉಡುಪಿ ಕೃಷ್ಣಮಠಕ್ಕೆ ಹೋಗಿ ಕೃಷ್ಣ ದರ್ಶನ ಪಡೆಯಿರಿ. ಅದರಿಂದ ನಿಮಗೆ ಒಳ್ಳೆಯದಾಗುತ್ತದೆ’.
ಹೀಗೆಂದವರು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ.
ಮಂಗಳವಾರ ಉಡುಪಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾವು ಉಡುಪಿಗೆ ಅನೇಕ ಬಾರಿ ಬಂದಿದ್ದರೂ ಕೃಷ್ಣಮಠಕ್ಕೆ ಭೇಟಿ ಕೊಡಲಿಲ್ಲ, ಕೃಷ್ಣ ದರ್ಶನ ಮಾಡಿಲ್ಲ. ಕನಕದಾಸರಿಗೆ ಕೃಷ್ಣ ಒಲಿದ ಪುಣ್ಯಭೂಮಿ ಉಡುಪಿ. ಕನಕದಾಸರ ಬಗ್ಗೆ ಭಕ್ತಿ ಗೌರವವುಳ್ಳ ಸಿದ್ಧರಾಮಯ್ಯ, ಕೃಷ್ಣ ದರ್ಶನ ಏಕೆ ಮಾಡುತ್ತಿಲ್ಲವೋ ಗೊತ್ತಿಲ್ಲ.
ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ದರ್ಶನ ಮಾಡದ ಕಾರಣ ಕೃಷ್ಣನ ಶಾಪದಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಾಯಿತು. ಈಗಲಾದರೂ ಕೃಷ್ಣ ದರ್ಶನ ಮಾಡಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಸ್ನೇಹಿತನಾಗಿ ಸಿದ್ಧರಾಮಯ್ಯ ಅವರಿಗೆ ಹಿತ ನುಡಿಯುವುದಾಗಿ ಈಶ್ವರಪ್ಪ ಹೇಳಿದರು.
ತನಗೂ ಸಿದ್ಧರಾಮಯ್ಯ ಅವರಿಗೂ ಸ್ನೇಹ, ಪ್ರೀತಿ ಇದೆ. ರಾಜಕಾರಣ ಬೇರೆ, ಮನುಷ್ಯತ್ವ ಬೇರೆ ಎಂದ ಈಶ್ವರಪ್ಪ, ಲೋಕ ಮೆಚ್ಚಿನ ಮೋದಿಯವರನ್ನು ನರಹಂತಕ ಎಂದಾಗ ಸುಮ್ಮನಿರಲಾಗುತ್ತದೆಯೇ? ಆಗ ತನ್ನದೇ ಆದ ಭಾಷೆಯಲ್ಲಿ ಸಿದ್ಧರಾಮಯ್ಯ ಅವರಿಗೆ ಉತ್ತರ ನೀಡಿದ್ದಾಗಿ ತಿಳಿಸಿದರು. ರಾಷ್ಟ್ರ ವಿರೋಧಿಗಳು, ದೇಶ ದ್ರೋಹಿಗಳ ವಿರುದ್ಧ ಸಿಟ್ಟು ಮಾಡುವುದಾಗಿ ಹೇಳಿದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನೇಕ ದೇವಾಲಯಗಳಿಗೆ ಹಣ ನೀಡಿದ್ದಾರೆ. ಕನಕ ದಾಸರ ಪುತ್ಥಳಿ ಸ್ಥಾಪಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪರ ಒಲವು ಹೊಂದಿರುವ ಸಿದ್ಧರಾಮಯ್ಯ ಅವರಿಗೆ ಕನಕನಿಗೊಲಿದ ಕೃಷ್ಣನನ್ನು ಕಂಡರೆ ಕೋಪವೇಕೆ ಎಂದು ಪ್ರಶ್ನಿಸಿದರು.
ಮಸೀದಿಗಳ ಆಝಾನ್ ರದ್ದು ಮಾಡಬೇಕೆಂಬ ತನ್ನ ಹೇಳಿಕೆ ವಿವಾದಿತ ಹೇಳಿಕೆ ಅಲ್ಲ, ಆ ಬಗ್ಗೆ ಸಾರ್ವತ್ರಿಕ ಪ್ರಶಂಸೆ ತನಗೆ ಲಭಿಸಿದೆ. ತನ್ನ ಹೇಳಿಕೆಗೆ ಬದ್ಧ ಎಂದು ಪುನರುಚ್ಚರಿಸಿದರು.