ರಾಯಚೂರು: ಸಿದ್ದರಾಮಯ್ಯನವರನ್ನು ದಲಿತರು, ಹಿಂದುಳಿದವರು ಸೋಲಿಸುತ್ತಾರೆ. ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸೋಲುತ್ತಾರೆ. ಪರಮೇಶ್ವರ ಕಾದು ಕುಳಿತಿದ್ದಾರೆ. ಖರ್ಗೆ, ಶ್ರೀನಿವಾಸ್ ಪ್ರಸಾದ್ ಇನ್ನಿತರ ನಾಯಕರೇ ಅವರನ್ನು ಸೋಲಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಮಿಮಿಕ್ರಿ ಕಲಾವಿದ. ವಿಶ್ವನಾಯಕ ಮೋದಿಯವರಿಗೆ ನರಹಂತಕ ಹೇಳುತ್ತಿರಲ್ಲ. ನಿಮಗೆ ಏನಂತ ಕರೆಯಬೇಕು. ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಕನಿಷ್ಠ ಪಕ್ಷ ಒಂದು ಬಾರಿ ಕ್ಷಮೆ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಐಪಿಎಸ್ ಅಧಿಕಾರಿ ಡಿ.ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕ್ರಿಯಿಸಿದ ಅವರು, ಐಎಎಸ್ ಅಧಿಕಾರಿಗಳು ನೇರವಾಗಿ ಪತ್ರಿಕಾಗೋಷ್ಠಿ ಮಾಡುವುದು ಸರಿಯಲ್ಲ. ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದು ಸರಿಯಲ್ಲ. ವೈಯಕ್ತಿಕ ದ್ವೇಷಕ್ಕೆ ಸುದ್ದಿಗೋಷ್ಠಿ ಮಾಡುವುದು ಸರಿಯಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವೆ ಎಂದು ಹೇಳಿದರು.