ಶಿಗ್ಗಾವಿ (ಹಾವೇರಿ): ಭಾವೈಕ್ಯದ ಬೀಡು ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸುವ ಸಂಬಂಧ ಏರ್ಪಡಿಸಿರುವ “ರೋಡ್ ಶೋ”ಗೆ ಜನಸಾಗರವೇ ಹರಿದು ಬಂದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಚಿತ್ರನಟ ಸುದೀಪ್ ಆಗಮನದ ಹಿನ್ನೆಲೆಯಲ್ಲಿ ಸಹಸ್ರಾರು ಜನರು ಪಟ್ಟಣದ ಕಿತ್ತೂರು ಚನ್ನಮ್ಮ ಸರ್ಕಲ್ ನಲ್ಲಿ ನೆರೆದಿದ್ದಾರೆ.
ಮೊದಲಿಗೆ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ರೋಡ್ ಶೋ ಆರಂಭವಾಗಲಿದೆ. ಸಂತೆ ಮೈದಾನ, ಹಳೇ ಬಸ್ ನಿಲ್ದಾಣ ಮಾರ್ಗದ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಲಿದೆ. ತಾಲ್ಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ಬಹಿರಂಗ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಜೆ.ಪಿ.ನಡ್ಡಾ ಮತ್ತು ಚಿತ್ರನಟ ಸುದೀಪ್ ಶಿಗ್ಗಾವಿಯ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ್ದು, ಬೊಮ್ಮಾಯಿ ಜತೆಗೆ ಮಾತುಕತೆ ನಡೆಸಿದ್ದಾರೆ. ಮೆರವಣಿಗೆಯಲ್ಲಿ ಜಗ್ಗಲಿಗೆ ತಂಡ, ಜನಪದ ಕಲಾ ತಂಡಗಳು ಮೆರುಗು ನೀಡಲಿವೆ. ಸುಡು ಬಿಸಿಲನ್ನು ಲೆಕ್ಕಿಸದೆ ಜನರು ಕಿಚ್ಚ ಸುದೀಪ್ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.


























