ಸಿಎಂ ಗೆದ್ದು ತೋರಿಸಲಿ: ಸವದಿ ಸವಾಲು

0
11

ಕೊಪ್ಪಳ(ಕುಷ್ಟಗಿ): ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನನ್ನನ್ನು ಉಪಮುಖ್ಯಮಂತ್ರಿ ಮಾಡಿ ಕುರ್ಚಿಗೆ ಕೂಡಿಸುವ ಸಂದರ್ಭದಲ್ಲಿ ಮುಳ್ಳಿನ ಹಾಸಿಗೆ ಮೇಲೆ ಕೂರಿಸಿದ್ದರು. ಪ್ರತಿಯೊಂದು ನಿರ್ಣಯ ಕೈಗೊಳ್ಳಬೇಕಾದರೂ ಬಿಜೆಪಿ ಮುಖಂಡರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದರು.
ಬರುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಲು ಕ್ಷೇತ್ರದ ಪ್ರಬುದ್ಧ ಮತದಾರರು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ೧೩೦ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ ಅವರು, ಬಿಜೆಪಿ ಕೇವಲ ೬೦ ರಿಂದ ೭೦ ಸ್ಥಾನಗಳಲ್ಲಿ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎಂದರು.
ರಮೇಶ್ ಜಾರಕಿಹೊಳಿ ಯಾರು?:
ನನ್ನ ಬಗ್ಗೆ ರಮೇಶ ಜಾರಕಿಹೊಳಿ ಮಾತನಾಡುವ ಯೋಗ್ಯತೆಯೇ ಕಳೆದುಕೊಂಡಿದ್ದಾರೆ. ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ರಮೇಶ್ ವಿಚಾರ ಮಾಡಲಿ. ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡಲು ರಮೇಶ ಜಾರಕಿಹೊಳಿ ಯಾರು? ಎಂದು ಪ್ರಶ್ನಿಸಿದರು.
ಕುಷ್ಟಗಿ ಕ್ಷೇತ್ರದಲ್ಲಿ ಅಮರೇಗೌಡರು ಸುಮಾರು ೨೦ ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರು ಅಮರೇಗೌಡರ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರು ಹೇಳಿಕೆಗಳೆಲ್ಲ ಸುಳ್ಳು. ಯಾಕೆಂದರೆ ಅಮರೇಗೌಡರು ಹಾಗೂ ನಾನು ಜನತಾ ಪರಿವಾರದಿಂದ ಬಂದವರು ಎಂದರು.

Previous articleರೈತ ಸಂಪರ್ಕ ಕೇಂದ್ರದ ಬೀಗ ಮುರಿದು ಕಳ್ಳತನ
Next articleಲಂಚ ಪಡೆಯುತ್ತಿದ್ದ ಪಿಎಸ್‌ಐ ಸೇರಿ ಮೂವರು ಪೊಲೀಸರು ಲೋಕಾ ಬಲೆಗೆ