ಧಾರವಾಡ : ಸುಳ್ಳು ಗ್ಯಾರಂಟಿ ನೀಡಿದ ಕಾಂಗ್ರೆಸ್ ಸರಕಾರ ಹೊಸ ಹೊಸ ಷರತ್ತು ವಿಧಿಸುತ್ತಿದ್ದು, ಯಾರಿಗೂ ಯೋಜನೆಯ ಪ್ರಯೋಜನ ಸಿಗದಂತೆ ಮಾಡುವ ಹುನ್ನಾರ ನಡೆದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೂ ಈಗ ಹೊಸ ಷರತ್ತು ವಿಧಿಸಲಾಗಿದೆ. ಸಿಎಂ ಸಿದ್ದರಾಮಯ್ಯ ರಾಜ್ಯ ಸರಕಾರ ೧೦ ಕೆ.ಜಿ. ಅಕ್ಕಿ ನೀಡುತ್ತಿದೆ ಎಂದು ಹೇಳುತ್ತಿದ್ದು, ಕೇಂದ್ರ ಸರಕಾರದಿಂದಲೇ ೫ ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂಬುದನ್ನು ಜನರಿಗೆ ಹೇಳಬೇಕು. ಕೇಂದ್ರ ಸರಕಾರದ ಯೋಜನೆ ಮರೆಮಾಚುವುದು ಸರಿಯಲ್ಲ. ಕೇಂದ್ರ ಸರಕಾರದ ಅನುದಾನ ಪಡೆದುಕೊಂಡು ಈಗ ಕೇಂದ್ರ ಸರಕಾರದಿಂದ ಯಾವುದೇ ಅನುದಾನವಿಲ್ಲ ಎನ್ನುವುದು ಸರಿಯಲ್ಲ. ಒಂದು ವೇಳೆ ಅವರಿಗೆ ಕೇಂದ್ರ ಸರಕಾರದ ಅನುದಾನ ಬೇಡವಾಗಿದ್ದರೆ ಅದನ್ನು ಸ್ಪಷ್ಟಪಡಿಸಬೇಕು ಎಂದರು.
ಎಂ.ಬಿ. ಪಾಟೀಲ್‌ಗೆ ಪಿತ್ತ ನೆತ್ತಿಗೇರಿದೆ: ದೇಶಭಕ್ತ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಕೂಡಲೇ ಕ್ಷಮೆಯಾಚಿಸಬೇಕು. ಸೂಲಿಬೆಲೆ ಅವರನ್ನು ಜೈಲಿಗೆ ಕಳಿಸುವುದಾಗಿ ಹೇಳಿರುವುದು ದುರಹಂಕಾರದ ಹೇಳಿಕೆ. ಪಿತ್ತ ನೆತ್ತಿಗೇರಿದ್ದಕ್ಕೆ ಪಾಟೀಲ ಹೀಗೆ ಮಾತನಾಡುತ್ತಿದ್ದಾರೆ. ಜನರು ಇದಕ್ಕೆ ಬುದ್ಧಿಕಲಿಸುತ್ತಾರೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.
ದೇಶದ ಪ್ರಧಾನ ಮಂತ್ರಿ ಸನ್ಯಾನ್ಯ ನರೇಂದ್ರ ಮೋದಿ ಅವರ ಬಗ್ಗೆ ಈ ಹಿಂದೆ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಎತೆಂಥ ಅಪದ್ಧ, ಅಸಭ್ಯ, ಅಯೋಗ್ಯ ಭಾಷೆಯನ್ನು ಬಳಸಿದ್ದರು. ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದರೂ ಸಂಯಮದಿಂದ ನಾವೆಲ್ಲ ನಡೆದುಕೊಂಡಿದ್ದೆವು. ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣೆಗಳು ಸಹಜ. ಕಾಂಗ್ರೆಸ್‌ನವರ ಆಡಳಿತ ಧೋರಣೆ ನೋಡಿ ಸೂಲಿಬೆಲೆ ಹಿಟ್ಲರ್ ಸರ್ಕಾರ ಅಂಥಾ ಹೇಳಿದ್ದಾರೆ. ಹಾಗೆ ಟೀಕೆ ಮಾಡಿದ್ದಕ್ಕೆ ಜೈಲಿಗೆ ಹಾಕುತ್ತೇವೆ ಎಂದು ಎಂ.ಬಿ. ಪಾಟೀಲ ಹೇಳಿರುವುದು ದುರಂಹಕಾರದ ಮಾತು. ಪಿತ್ತ ನೆತ್ತಿಗೇರಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಟ್ವೀಟ್ ಆಧಾರದ ಮೇಲೆ ನಿರ್ಧಾರವಾಗಲ್ಲ: ಯಾರೋ ಒಬ್ಬರು ವೀರಶೈವ ಲಿಂಗಾಯತ ಸಂಘಟನೆ ಎಂದು ಹೇಳಿಕೊಂಡು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿ ಅವರಿಗೆ ಈ ಬಾರಿ ಟಿಕೇಟ್ ನೀಡಬಾರದೆಂಬ ಟ್ವೀಟ್ ಸಂದೇಶ ವೈರಲ್ ಮಾಡಿದ ಕುರಿತು ಮಾತನಾಡಿದ ಅವರು ಯಾರೋ ಒಬ್ಬರು ಕಳಿಸಿದ ಮೆಸೇಜ್‌ಗೆ ಮಹತ್ವ ನೀಡುವ ಅವಶ್ಯಕತೆಯಿಲ್ಲ. ಯಾವುದೇ ಟ್ವೀಟ್ ಆಧಾರದ ಮೇಲೆ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ನಿರ್ಧಾರವಾಗುವುದಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.