ಸಂವಿಧಾನ ಬರೆದಿರೋರು ಕುಮಾರಸ್ವಾಮಿ ಅಲ್ಲ: ಮಾಜಿ ಸಿಎಂಗೆ ಸಚಿವ ಭೈರತಿ ತಿರುಗೇಟು

0
18

ಕೋಲಾರ: ಸರ್ಕಾರ ಕಾನೂನು ಪಾಲನೆ ಮಾಡಿ ನಡೆದುಕೊಳ್ಳಬೇಕು, ಸಂವಿಧಾನವನ್ನು ಬರೆದಿರುವುದು ಕುಮಾರಸ್ವಾಮಿ ಅಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಪ್ರಕಾರವೇ ಸರ್ಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು.
ಕೋಲಾರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಬೈರತಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ ಮೇಲ್ಮನವಿ ಸಲ್ಲಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆಗೆ ಪ್ರತಿಕ್ರಿಯೆ ನೀಡಿ ಈ ತಿರುಗೇಟು ನೀಡಿದರು.
ಕರ್ನಾಟಕದಲ್ಲಿ ಬರಗಾಲ ವ್ಯಾಪಿಸಿದೆ, ನೀರು ಇಲ್ಲದಿದ್ದರೂ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ರನ್ನು ಓಲೈಸುವ ಸಲುವಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ನಮಗೆ ಯಾರನ್ನು ಓಲೈಸುವ ಅಗತ್ಯವಿಲ್ಲ, ಕರ್ನಾಟಕದ ಜನರನ್ನು ಓಲೈಸುವುದು ಮುಖ್ಯ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಮುಂದೆ ಸಮರ್ಥವಾಗಿ ವಾದ ಮಂಡಿಸುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಸುರೇಶ್ ಕಳೆದ 15 ವರ್ಷಗಳಿಂದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಯಾವ ವಕೀಲರು ಇದ್ದರು ಅದೇ ವಕೀಲರು ಈಗಲೂ ಮುಂದುವರೆದಿದ್ದಾರೆ, ಅವರು ಸಮರ್ಥವಾಗಿ ವಾದ ಮಂಡಿಸುತ್ತಿದ್ದಾರೆ ಎಂದು ಸಮರ್ಥನೆ ನೀಡಿದರು.
ರಾಜ್ಯದಲ್ಲಿ ನೀರು ಇಲ್ಲವೇ ಇಲ್ಲ, ಆದರೂ ಸಹ ಪರಿಸ್ಥಿತಿಯನ್ನು ಅರ್ಥ.ಮಾಡಿಕೊಳ್ಳದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸೂಚಿಸಲಾಗುತ್ತಿದೆ, ಸುಪ್ರೀಂಕೋರ್ಟ್ ಮತ್ತು ಪ್ರಾಧಿಕಾರದ ಸೂಚನೆ ಹೊರತುಪಡಿಸಿ ಹೆಚ್ಚುವರಿ ನೀರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Previous articleಜನರ ಬಳಿಗೆ ಆಡಳಿತ: ಇದು ನಮ್ಮ ಸರ್ಕಾರದ ಬದ್ಧತೆ
Next articleಸಾರ್ವಜನಿಕರು-ಅಧಿಕಾರಿಗಳ ಎದುರೇ ಸಂಸದ ಮತ್ತು ಶಾಸಕರ ಮಧ್ಯೆ ಹೊಡೆದಾಟ