ಶ್ರೀರಂಗಪಟ್ಟಣ : ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು ಆದೇಶ ಹೊರಡಿಸಿರುವ ಕಾವೇರಿ ನಿಯಂತ್ರಣ ಸಮಿತಿಯ ಸೂಚನೆಯನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತರ ಆಕ್ರೋಷ ಭುಗಿಲೆದ್ದಿದ್ದು ಹೆದ್ದಾರಿ ತಡೆ ಮೂಲಕ ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಾನವ ಸರಪಳಿ ನಿರ್ಮಿಸಿ ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಸರ್ಕಾರವನ್ನು
ಒತ್ತಾಯಿಸಿದರು. ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗದಿದ್ದರೂ, ಕನ್ನಂಬಾಡಿ ಅಣೆಕಟ್ಟೆ ಬರಿದಾಗದಿದ್ದರೂ ನೀರು ಬಿಡಬೇಕೆನ್ನುವುದು ಯಾವ ನ್ಯಾಯ ಎಂದು ಸಮಿತಿಯ ಸೂಚನೆಯನ್ನು ಪ್ರಶ್ನಿಸಿದರು. ಮೋದಿ ವಿರುದ್ದ ಕಿಡಿ: ಯಾವುದೇ ದೇಶದಲ್ಲಿ ಯುದ್ದ ಸಂಭವಿಸಿದರೆ ಸಂಧಾನಕ್ಕೆ ತೆರಳುವ ಪ್ರಧಾನಿ ಮೋದಿ, ಕರ್ನಾಟಕ ಮತ್ತು ತಮಿಳುನಾಡಿನ ಮದ್ಯೆ ನಡೆಯುತ್ತಿರುವ ಕಾವೇರಿ ನೀರಿನ ವಿಷಯವಾಗಿ ಯಾಕೆ ಮದ್ಯ ಪ್ರವೇಶಿಸುತ್ತಿಲ್ಲ. ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಬರುವ ಪ್ರಧಾನಿಗಳು, ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಯಾಕೆ ಮೌನವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನ್ಯಾಯಾಲಯ ಹಾಗೂ ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಬರುತ್ತಿದ್ದು, ನಮಗೆ ಕುಡಿಯುವ ನೀರನ್ನು ಎಲ್ಲಿಂದ ನೀಡಲಿದ್ದಾರೆ ಎಂಬುದನ್ನು ಅವರು ಮೊದಲು ರಾಜ್ಯದ ಜನತೆಗೆ ತಿಳಿಸಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಈ ಅವೈಜ್ಞಾನಿಕ ತೀರ್ಪನ್ನು ಖಂಡಿಸಬೇಕಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬಾರದೆಂದು ಆಗ್ರಹಿಸಿದರು.
ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪೋಲೀಸರು ಮುಂಜಾಗೃತಾ ಕ್ರಮವಾಗಿ ಈ ಮಾರ್ಗದ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಬದಲಿ ಮಾರ್ಗದ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು