ಶ್ರೀರಂಗಪಟ್ಟಣ: ಪಟ್ಟಣದಲ್ಲಿ ರೈತಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ‘ಜಾಗಟೆ ಬಾರಿಸುವ ಪ್ರತಿಭಟನೆ’ ನಡೆಸಿ ಗೋವಿಂದ..! ಗೋವಿಂದ..! ಘೋಷಣೆ ಕೂಗುವ ಮೂಲಕ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಕುವೆಂಪು ವೃತ್ತದಿಂದ ಜಾಗಟೆ ಬಾರಿಸಿಕೊಂಡು ಮುಖ್ಯ ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ತಾಲ್ಲೂಕು ಕಚೇರಿ ಎದುರು ಒಂದು ಗಂಟೆಗೂ ಅಧಿಕ ಸಮಯ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ರಾಜ್ಯದ ಹಿತ ಕಾಯಬೇಕಿದ್ದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ಕೈಕಟ್ಟಿ ಕುಳಿತಿದೆ. ಎರಡು ರಾಜ್ಯಗಳ ಹಿತ ಕಾಯಬೇಕಿದ್ದ ಕೇಂದ್ರ ಮೌನವಹಿಸಿದೆ. ರಾಜ್ಯದ ಸಂಸದರು ಕೇಂದ್ರ ಹಾಗೂ ಪ್ರಾಧಿಕಾರದ ಮೇಲೆ ಒತ್ತಡ ತಂದು ರಾಜ್ಯದ ರಕ್ಷಣೆಗೆ ಮುಂದಾಗಬೇಕು. ರಾಜ್ಯ ಹಾಗೂ ಜಿಲ್ಲೆಯ ಶಾಸಕರುಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಕಾವೇರಿ ನೀರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ ಪ್ರಾಧಿಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕೆಂದು ಆಗ್ರಹಿಸಿದರು.