ಶ್ರೀರಂಗಪಟ್ಟಣ : ಪಟ್ಟಣದ ಹೊರವಲಯದ ಬೊಮ್ಮೂರ ಅಗ್ರಹಾರದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಸೀದಿ ಸ್ಥಳ ವಿವಾದಕ್ಕೆ ತೆರೆ ಬಿದ್ದಿದೆ. ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಎರಡೂ ಸಮುದಾಯದ ನಡುವೆ ರಾಜಿ ಸಂದಾನ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿದರು.
ಈ ಜಾಗದಲ್ಲಿ ಈಗಾಗಲೇ ಮನೆ ನಿರ್ಮಿಸಿ ಕೊಂಡವರಿಗೂ ತೊಂದರೆ ಆಗಬಾರದು. ಮಸೀದಿ ಸ್ಥಳಕ್ಕೂ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿ ಎರಡೂ ಸಮುದಾಯ ಒಟ್ಟಿಗೆ ಬಾಳ್ವೆ ನಡೆಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅರಬ್ ಸಾಹೇಬ್ ಮಸೀದಿ ಕಾಂಪೌಂಡ್ ಗೋಡೆ ನಿರ್ಮಾಣ, ಹಜರತ್ ದಾವೂದ್ ಮಕಾನ್ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಸಂರಕ್ಷಣೆ ಗಾಗಿ ತಲಾ ಐದು ಲಕ್ಷ ರೂ. ನೆರವು ವಖ್ಫ್ ಮಂಡಳಿ ಯಿಂದ ನೀಡಿ ಆದೇಶ ಪ್ರತಿ ಮಸೀದಿ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದರು. ಇದಕ್ಕೂ ಮುನ್ನ ಗಂಜಾಂನ ಗುಂಬಸ್ ಗೆ ತೆರಳಿ, ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಸಮಾದಿಗೆ ಹೂವಿನ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು. ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.