ವಿಟ್ಲ: ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಮಿಕ್ ಧಾರ್ಮಿಕ ಪ್ರವಚನ ಮಾಡಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಇದಲ್ಲದೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು ಎರಡು ಕೋಮುಗಳ ನಡುವೆ ಸಂಘರ್ಷ ಉಂಟು ಮಾಡುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಕಾರ್ಯಾಗಾರ ಸಂಘಟಕರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಎಂಬ ಸಂಘಟನೆ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಾಗಾರ ಆಯೋಜಿಸುತ್ತಿದ್ದು, ಅದರಂತೆ ಶನಿವಾರ ಅಡ್ಯನಡ್ಕದ ಹಾಲ್ ವೊಂದರಲ್ಲಿ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಂಡಿತ್ತು. ಸ್ಥಳೀಯ ಖಾಸಗಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು ಕಾರ್ಯಾಗಾರ ನಡೆಯುತ್ತಿದ್ದ ಹಾಲ್‌ಗೆ ನುಗ್ಗಿ ಅಡ್ಡಿಪಡಿಸಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸಿರುವ ಎಲ್ಲ ಹಿಂದೂ ವಿದ್ಯಾರ್ಥಿಗಳು ಹಾಲ್‌ನಿಂದ ಹೊರಬನ್ನಿ ಎಂದು ಒತ್ತಾಯಿಸಿದರು ಎಂದು ತಿಳಿದುಬಂದಿದೆ.
ದೂರು ದಾಖಲು:
ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು, ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಸಹಿತ ಕಾರ್ಯಾಗಾರ ಆಯೋಜಕರ ವಿರುದ್ಧ ಕೇಪು ನೆಕ್ಕರೆ ಮನೆಯ ಮಾಧವ ಮೂಲ್ಯ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.