ಶೀಘ್ರದಲ್ಲೇ ನೂತನ ಮಸೂದೆಗಳಿಗೆ ಸಂಸತ್‌ ಅನುಮೋದನೆ

0
19

ಬ್ರಿಟಿಷರ ಕಾಲದ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಸಿಆರ್‌ಪಿಸಿ ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆಯನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಕೆಡೆಟ್‌ಗಳ ಪಾಸಿಂಗ್ ಔಟ್ ಪರೇಡ್‌ನಲ್ಲಿ ಮಾತನಾಡಿದ ಅಮಿತ್‌ ಶಾ, ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳನ್ನು ತ್ಯಜಿಸುತ್ತಿದೆ ಮತ್ತು ಹೊಸ ಆತ್ಮವಿಶ್ವಾಸ ಹಾಗೂ ಹೊಸ ಭರವಸೆಗಳೊಂದಿಗೆ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು.
ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಮೂರು ಹೊಸ ಮಸೂದೆಗಳನ್ನು ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ ಅಂಗೀಕರಿಸಲಾಗುತ್ತದೆ. ಹೊಸ ಕಾನೂನುಗಳು ಜನರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ. ಮಹಿಳಾ ಐಪಿಎಸ್ ಕೆಡೆಟ್‍ಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಆರ್‌ಪಿಸಿ, ಐಪಿಸಿ ಮತ್ತು ಎವಿಡೆನ್ಸ್ ಕಾಯ್ದೆ – ಈ ಮೂರು ಕಾನೂನುಗಳನ್ನು 1850 ರ ಸುಮಾರಿಗೆ ರಚಿಸಲಾಗಿದೆ. ಈ ಮೂರು ಕಾನೂನುಗಳಲ್ಲಿ ಸರ್ಕಾರವು ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಭಾರತೀಯ ಸಂಸತ್ತಿನಲ್ಲಿ ಮೂರು ಹೊಸ ಕಾನೂನುಗಳನ್ನು ಮಂಡಿಸಲಾಗಿದೆ. ಗೃಹ ಸಚಿವಾಲಯದ ಸಂಸತ್ತಿನ ಸಮಿತಿಯ ಮೂಲಕ ಇದು ಸಾಗುತ್ತಿದ್ದು, ಸ್ವಲ್ಪ ಸಮಯದ ನಂತರ ಈ ಕಾನೂನುಗಳು ಅಂಗೀಕರಿಸಲ್ಪಡುತ್ತವೆ ಮತ್ತು ಈ ಕಾನೂನುಗಳ ಆಧಾರದ ಮೇಲೆ ನಮ್ಮ ದೇಶದ ಹೊಸ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಪ್ರಾರಂಭವಾಗುತ್ತದೆ ಎಂದೂ ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

Previous articleದತ್ತಪೀಠದ ಶಾಖಾದ್ರಿ ಮೇಲೂ ಸೂಕ್ತ ಕ್ರಮಕ್ಕೆ ಆಗ್ರಹ
Next article“ಹುಲಿಯುಗುರು” ಎಂಬ ಸದಾರಮೆ ನಾಟಕ