ವಾಂತಿ ಬೇಧಿ ಪ್ರಕರಣ: ಕರ್ತವ್ಯಲೋಪದಡಿ ಬಸರಿಹಾಳ, ಬಿಜಕಲ್ ಪಿಡಿಓ ಅಮಾನತ್ತು

0
38

ಕುಷ್ಟಗಿ:ತಾಲೂಕಿನ ಬಿಜಕಲ್ ಗ್ರಾಪಂ ಪಿಡಿಒ,ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳನ್ನು ಕರ್ತವ್ಯಲೋಪದಡಿ ಅಮಾನತ್ತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಜೂ.3ರಿಂದ ಜೂ6 ರವರೆಗೆ ಹಾಗೂ ಕುಷ್ಟಗಿ ತಾಲ್ಲೂಕಿನ ಬಿಜಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಜೂ.1 ರಿಂದ ಜೂ.6 ರವರೆಗೆ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ತಪಾಸಣಾ ವರದಿಯಲ್ಲಿರುವಂತೆ ಗ್ರಾಮದಲ್ಲಿ ಸ್ವಚ್ಚತೆ, ನೈರ್ಮಲೀಕರಣ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಜವಾಬ್ದಾರಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿ ನಿರ್ಲಕ್ಷ್ಯತೆ ಕಂಡು ಬಂದಿರುತ್ತದೆ.
ಈ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನ ಪಾಂಡೆ ಜೂ.9 ರಂದು ನೀಡಿದ ವರದಿಯನ್ವಯ ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪ್ರಭಾರ) ಹಾಗೂ ಕುಷ್ಟಗಿ ತಾಲ್ಲೂಕಿನ ಬಿಜಕಲ್ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರುಗಳು ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಈ ಪ್ರಯುಕ್ತ ರವೀಂದ್ರ ಕುಲಕರ್ಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪುಭಾರ), ಬಸರಿಹಾಳ ಗ್ರಾಮ ಪಂಚಾಯತಿ, ಕನಕಗಿರಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಹಾಗೂ ನಾಗೇಶ ಅರಳಿಗನೂರು, ಗ್ರೇಡ್-1 ಕಾರ್ಯದರ್ಶಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪ್ರಭಾರ), ಬಿಜಕಲ್ ಗ್ರಾಮ ಪಂಚಾಯತಿ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಇವರು ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸೆಕ್ಷನ್ (2)ರನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಸೆಕ್ಷನ್ (77) & (85) ರನ್ವಯ ಎಸಗಿರುವ ಆರೋಪಗಳ ಕುರಿತು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಾಮಾವಳಿಗಳು, 1957ರ ನಿಯಮ 10(1)(3) ರನ್ವಯ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ಅಪಾದಿತರು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 98 ರನ್ವಯ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಪ್ರಿಯಾಂಕ ಮೇರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Previous articleನವನಗರ: ಎರಡು ಕೋಮುಗಳ ನಡುವೆ ಗಲಾಟೆ: ಕಲ್ಲು ತೂರಾಟ..!
Next articleತಂದೆಯಿಂದಲೇ ಮಕ್ಕಳಿಬ್ಬರ ಹತ್ಯೆ: ತಾಯಿ ಗಂಭೀರ ಗಾಯ