ಹಾವೇರಿ(ಹಿರೇಕೆರೂರು): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗಿದ್ದರೂ, ಬಡವರಿಗೆ ಒಂದೇ ಒಂದು ಸೂರು ಕೊಟ್ಟಿಲ್ಲ. ಬಡವರಿಗೆ ಸೂರು ಕೊಡಲಾಗದವರು ಅಧಿಕಾರದಲ್ಲಿ ಏಕೆ ಇರಬೇಕು. ಅಭಿವೃದ್ಧಿ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ನಾವು ಬಿಜೆಪಿ ರೀತಿ ಸುಳ್ಳು ಹೇಳಲ್ಲ. ಪ್ರಣಾಳಿಕೆಯಲ್ಲಿ ಇನ್ನೂ ೨ ಗ್ಯಾರಂಟಿ ಕೊಡುತ್ತೇವೆ. ೨೦೧೩ರ ಚುನಾವಣೆಯಲ್ಲಿ ೧೬೫ ಭರವಸೆಗಳಲ್ಲಿ ೧೫೮ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು, ಇನ್ನೂ ೩೦ ಹೊಸ ಕಾರ್ಯಕ್ರಮ ನೀಡಿದ್ದೇವೆ. ಬಿಜೆಪಿ ಕೊಟ್ಟ ಭರವಸೆ ಈಡೇರಿಸಿದೆ ವಚನಭ್ರಷ್ಟವಾಗಿದೆ ಎಂದು ಹರಿಹಾಯ್ದರು.
ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಲೂಟಿ ಹೊಡೆದದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಜ್ಯ ಉಳಿಯಬೇಕಾದರೆ ಈ ಬಾರಿ ಬಿಜೆಪಿ ಸೋಲಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಲ್ಲಿ ಬರೀ ಲೂಟಿ ಹೊಡೆಯುವ ಕೆಲಸ ಮಾಡಿದೆ. ಅವರನ್ನು ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಎಂದು ಕರೆಯುತ್ತೇನೆ. ಆ ಕಳ್ಳರಲ್ಲಿ ಬಿ.ಸಿ. ಪಾಟೀಲ ಕೂಡ ಒಬ್ಬ. ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲೋಕಾಯುಕ್ತ ದಾಳಿ ಮಾಡಿದಾಗ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಹಾಕಿಕೊಂಡ. ಅವರ ಮನೆಯಲ್ಲಿ ೮ ಕೋಟಿ ರೂ., ಸಿಕ್ಕಿತು. ಒಬ್ಬ ಸಚಿವ ಬಿ.ಸಿ.ಪಾಟೀಲ ಮನೆ ಮೇಲೆ ರೇಡ್ ಮಾಡಿದರೆ ಎಷ್ಟು ಕೋಟಿ ಸಿಗಬಹುದು? ಕನಿಷ್ಠ ೧ ಸಾವಿರ ಕೋಟಿ ಸಿಗಬಹುದು. ರೈತರ ಹೆಸರು ಹೇಳಿ ಲೂಟಿ ಹೊಡೆಯೋದೇ ಅವರ ಕೆಲಸ ಎಂದು ದೂರಿದರು.