ದಾವಣಗೆರೆ: ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜ್ಯದ ಜನತೆ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೆ ಸೋಲು ನಿಶ್ಚಿತ ಎಂದು ತಿಳಿದು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಲಿಂಗಾಯತ ಸಿಎಂ ಭ್ರಷ್ಟರೆಂದು ಹೇಳಿಕೆ ನೀಡಿರುವುದು ಸರಿಯಲ್ಲ. ಈ ತರಹದ ಹೇಳಿಕೆಯನ್ನ ಅವರು ಕೊಡಬಾರದು ಎಂದರು.
ಕರ್ನಾಟಕದಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಪ್ರವಾಸ ಮಾಡಲು ರಾಜ್ಯದ ಬಗ್ಗೆ ರಾಹುಲ್‌ಗೆ ಏನು ಗೊತ್ತಿದೆ? ಅವರೇನು ಲೆಕ್ಕಕ್ಕಿಲ್ಲ, ಪ್ರಧಾನಿ ಮೋದಿ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ ಎಂದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಧೂಳಿಪಟವಾಗುವುದು ನಿಶ್ಚಿತ. ಕಾಂಗ್ರೆಸ್ 60 ಸ್ಥಾನ ಪಡೆಯಬಹುದಷ್ಟೇ. ಆದರೆ ನಾವು 140 ಸ್ಥಾನ ಪಡೆದು ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಈ ಬಾರಿ ಬಿಜೆಪಿ 140 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತದೆ. ಸ್ವಂತ ಬಲದಿಂದ ನಮ್ಮ ಸರ್ಕಾರ ರಚನೆಗೊಳ್ಳುತ್ತದೆ. ಇವತ್ತಿನಿಂದ ನನ್ನ ರಾಜ್ಯ ಪ್ರವಾಸ ಆರಂಭವಾಗಿದ್ದು, ರಾಜ್ಯದಲ್ಲಿ 70 ಕ್ಷೇತ್ರದಲ್ಲಿ ಓಡಾಡಿಕೊಂಡು ಮತದಾನದ ಕೊನೆ ದಿನದ ವರೆಗೂ ಪ್ರಚಾರ ಮಾಡುತ್ತೇನೆ ಎಂದರು.
ಮುಸ್ಲಿಂ ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಬಿಎಸ್‌ವೈ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಬೇಕು. ತೀರ್ಪಿಗೆ ನಾವು ಬದ್ಧರಾಗಬೇಕಾಗುತ್ತೆ ಎಂದು ಸುಪ್ರೀಂ ಕೋರ್ಟ್ ತಡೆ ವಿಚಾರ ಸಮರ್ಥಿಸಿಕೊಂಡರು.