ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಕಣ ಕಾವೇರುತ್ತಿದ್ದಂತೆಯೇ ಗಡಿನಾಡ ಬೆಳಗಾವಿಯಲ್ಲಿ ನಾಡದ್ರೋಹಿಗಳು ಭಾಷೆ ಮತ್ತು ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಖಾತೆಗಳ ಮೂಲಕ ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ 2ಎ ಮೀಸಲಾತಿಗಾಗಿ ಹೋರಾಟ ಮಾಡಿದ ಲಿಂಗಾಯತ ಹೋರಾಟಗಾರನನ್ನು ಹಿಂದೂ' ಎಂದು ಆಯ್ಕೆ ಮಾಡುವುದು ಎಂದರೆ,ಹುಲಿ ಚರ್ಮದ ನಾಯಿಯನ್ನು ಕಾಡಿಗೆ ಬಿಟ್ಟಂತೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖ ಮಾಡಲಾಗಿದೆ.
ಸಂಭಾಜಿರಾವ್ ಪಾಟೀಲರು ಶಾಸಕರಾಗಿದ್ದ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡರೊಂದಿಗೆ ಟಿವಿ ಸಂದರ್ಶನದಲ್ಲಿ ನಡೆದ ವಾಗ್ವಾದವನ್ನು ಎಡಿಟ್ ಮಾಡಿ ಭಾಷಾ ವೈರತ್ವ ಹುಟ್ಟಿಹಾಕುವ ಕೆಲಸವನ್ನು ಕಿಡಿಗೇಡಿಗಳು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ, ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಖಾತೆಗಳ ಮೂಲಕ ಇಷ್ಟೆಲ್ಲ ವೈರಲ್ ಆಗುತ್ತಿದ್ದರೂ ಕೂಡ ಸಂಬಂಧಿಸಿದವರು ಗಮನಹರಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
























