ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲ: ಈಗಲಾದರೂ ಬಾಯಿ ತೆರೆಯಿರಿ

0
12

ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಸಕಾರಣ ಇಲ್ಲದೆ ವಿಚಾರಣೆ ಮುಂದೂಡಿರುವುದು ಕಾವೇರಿ ಕಣ್ಣಿಗೆ ಬಟ್ಟೆ ಕಟ್ಟಿದ್ದು, ಆಳುವ ಸರ್ಕಾರಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದರು
ರೈತ ಹಿತ ರಕ್ಷಣಾ ಸಮಿತಿಯ ಏಳನೇ ದಿನದ ಧರಣಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನ್ಯಾಯಾಧೀಶರಿಗೆ ಅನಾರೋಗ್ಯದ ನೆಪಯೊಡ್ಡಿ ವಿಚಾರಣೆಯನ್ನು ಸೆ 21ಕ್ಕೆ ಮುಂದೂಡಿಕೆ ಮಾಡಿರುವುದು ನೋವಿನ ಸಂಗತಿಯಾಗಿದೆ ಎಂದರು.
ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿ ಜಲಾಶಯಗಳನ್ನು ಬರಿದು ಮಾಡಲಾಗಿದೆ, ಕುಡಿಯುವ ನೀರನ್ನು ಸಹ ಬಿಡಲಾಗುತ್ತಿದೆ,ಇದರಿಂದ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರ ಬರುವವರೆಗೂ ಪ್ರತಿನಿತ್ಯ ನೀರು ಹರಿಸುತ್ತಿದ್ದರೆ ರೈತರ ಸ್ಥಿತಿಯನ್ನು ಹೇಳತೀರದಾಗಿದೆ ಎಂದರು.
ಮಂಡ್ಯ ಸಂಸದ ಸುಮಲತಾ ಅಂಬರೀಶ್ ಸೇರಿ ಕಾವೇರಿ ಜಲಾನಯನ ಪ್ರದೇಶದ ಎಂಟು ಜಿಲ್ಲೆಗಳ ಸಂಸದರು ರೈತರಿಗೆ ದ್ರೋಹ ಮಾಡಿದ್ದಾರೆ,ಕಾವೇರಿ ನೀರೆಲ್ಲ ಕೊಚ್ಚಿ ಹೋಗುತ್ತಿದೆ, ಈಗಲಾದರೂ ಬಾಯಿ ತೆರೆಯಿರಿ.ರಾಜ್ಯದ 28 ಸಂಸದರು ಕೇಂದ್ರಕ್ಕೆ ತೆರಳಿ ನೀರು ನಿಲ್ಲಿಸುವ ಕೆಲಸ ಮಾಡಲಿ, ಬೀದಿಗಿಳಿದು ಹೋರಾಡಲಿ ಎಂದು ಆಗ್ರಹಿಸಿದರು.
ಸಂಸದೆ ಸುಮಲತಾ ಅಂಬರೀಶ್ ಸಮಯ ಪ್ರಜ್ಞೆಯಿಂದ ನಾಜೂಕಾಗಿ ಮಾತನಾಡುವ ಕಲೆ ಹೊಂದಿದ್ದು.ರೈತರಿಗೆ ಅನ್ಯಾಯ ಆಗಿದ್ದು ಈಗಲಾದರೂ ಮಾತನಾಡಲಿ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ, ನ್ಯಾಯಾಲಯದ ಎದುರು ಸಮರ್ಥವಾದ ಮಂಡನೆಯಿಂದ ಪರಿಹಾರ ಪಡೆಯಲು ಸಾಧ್ಯವಿದೆ, ಆದರೆ ನೀರು ಹರಿಸುತ್ತಾ ರೈತರ ಬದುಕನ್ನು ಸಂಕಷ್ಟಕ್ಕೆ ದೂಡುತಿದೆ, ಕೇಂದ್ರ ಸರ್ಕಾರ ಎಲ್ಲವನ್ನು ಕಂಡು ಮೌನವಹಿಸಿದೆ ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಂದೂಡಿಕೆಯಾಗಿರುವುದರಿಂದ ರಾಜು ಸರ್ಕಾರ ಯಾವ ರೀತಿಯ ನಿಲುವು ತಾಳಲಿದೆ ಎಂಬುದನ್ನು ಕಾಯ್ದು ನೋಡುತ್ತಿದ್ದೇವೆ, ಜಲಾಶಯಗಳಿಂದ ಬಿಟ್ಟಿರುವ ನೀರು ತಕ್ಷಣ ನಿಲ್ಲಿಸ ಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು,ಸರ್ಕಾರದ ನಿರ್ಧಾರ ಯಾವ ರೀತಿ ಇರಲಿದೆ ನೋಡೋಣ ಎಂದರು. ಮುಂದಿನ ಹೋರಾಟದ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ, ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯುತ್ತೆವೆ ಎಂದರು.

Previous articleಕಾವೇರಿ ನೀರು ಹಂಚಿಕೆ: ಅರ್ಜಿ ವಿಚಾರಣೆ ಸೆ.21ಕ್ಕೆ
Next articleಬೆಂಗಳೂರು-ಜಲಸೂರು ರಸ್ತೆ ಕಾಮಗಾರಿ 6 ತಿಂಗಳಲ್ಲಿ ಪೂರ್ಣ