ರಜೆ ದಿನವೂ ಪಾಲಿಕೆ ಆಯುಕ್ತರ ಸಿಟಿ ರೌಂಡ್ಸ್

0
15

ಬೆಳಗಾವಿ: ಸರಕಾರಿ ರಜೆಯ‌ ದಿನವಾಗಿರುವ ಎರಡನೇ ಶನಿವಾರವೂ ಸಿಟಿ‌ ರೌಂಡ್ಸ್ ಮುಂದುವರಿಸಿರುವ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ‌ ದುಡಗುಂಟಿ ಅವರು ಇಂದು‌ ನಸುಕಿನಜಾವ ವಿವಿಧ ಕಡೆ ಭೇಟಿ ನೀಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು.
ನಗರದ ಸರ್ದಾರ್ ಮೈದಾನದ ಬಳಿಯ ಬೀಟ್ ಕಚೇರಿಯಲ್ಲಿ ಪೌರಕಾರ್ಮಿಕರ ಆನ್‌ಲೈನ್ ಹಾಗೂ ಆಫ್‌ಲೈನ್ ಬಯೋಮೆಟ್ರಿಕ್ ಹಾಜರಾತಿಯನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಮಹಾನಗರ ಪಾಲಿಕೆಯ ಗ್ಯಾರೇಜ್‌ಗೆ ಭೇಟಿ ನೀಡಿದ ಆಯುಕ್ತರು, ವಾಹನಗಳ ಚಾಲಕರ ಹಾಜರಾತಿಯನ್ನು ಪರಿಶೀಲಿಸಿದರು. ಇದಾದ ಬಳಿಕ ಕಿರ್ಲೋಸ್ಕರ್ ರಸ್ತೆಯಲ್ಲಿ ಚಿಂದಿ ಆಯುವವರ ಜೊತೆ ಮಾತನಾಡಿ ಕುಶಲೋಪರಿ ವಿಚಾರಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ) ನಿರ್ದೇಶನದಂತೆ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ 475 ಚಿಂದಿ ಆಯುವವರಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ನೀಡಲಾಗಿರುತ್ತದೆ. ಈ ಕುರಿತು ಚಿಂದಿ‌ ಆಯುವವರ ಜತೆ ಚರ್ಚೆ ನಡೆಸಿದರು. ತದನಂತರ ಖಾಸಬಾಗ್ ಲೆಗಸಿ ವೆಸ್ಟ್ ಲ್ಯಾಂಡ್, E-waste ಸೆಂಟರ್‌ಗೆ ಭೇಟಿ ನೀಡಿದರು. ಅಲ್ಲಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರದ ವ್ಯವಸ್ಥೆಯನ್ನು ಪರಿಶೀಲಿಸಿ, ಸ್ವಚ್ಛತೆ ಕಾಪಾಡುವ ಕುರಿತು ಅಲ್ಲಿನ ಸಿಬ್ಬಂದಿಗೆ ಸೂಚನೆ ನೀಡಿದರು.
ಕಿರಿಯ ಆರೋಗ್ಯ ನಿರೀಕ್ಷಕಿ ಶಿಲ್ಪಾ ಕುಂಬಾರ ಅವರು ತಮ್ಮ ವ್ಯಾಪ್ತಿಯ ಆರು ವಾರ್ಡುಗಳಲ್ಲಿ ಮಧ್ಯಪ್ರದೇಶದ ಇಂಧೋರ್ ಮಾದರಿಯಲ್ಲಿ ಕಸ ವಿಂಗಡಣೆ ಮಾಡುತ್ತಿರುವುದನ್ನು ವೀಕ್ಷಿಸಿದ ಆಯುಕ್ತ ಅಶೋಕ ದುಡಗುಂಟಿ ಅವರು, ಇತರೆ‌ ವಾರ್ಡುಗಳಲ್ಲಿ ಕೂಡ ಇದೇ ರೀತಿ ಕಸ ವಿಂಗಡಣೆ ಮಾಡಬೇಕು ಎಂದು ಇತರೆ ಆರೋಗ್ಯ ನಿರೀಕ್ಷಕರು ಮತ್ತು ಪರಿಸರ ಅಭಿಯಂತರರಿಗೆ ನಿರ್ದೇಶನವನ್ನು ನೀಡಿದರು.
ಪೌರಕಾರ್ಮಿಕರ ವಸತಿಗೃಹಗಳಿಗೆ ಭೇಟಿ:
ನಗರದಲ್ಲಿ ಇರುವ ಪೌರಕಾರ್ಮಿಕರ ವಸತಿಗೃಹ(ಪಿ.ಕೆ.ಕ್ವಾರ್ಟರ್ಸ್)ಕ್ಕೆ ಭೇಟಿ ನೀಡಿ, ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಇದೇ ವೇಳೆ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಆಯುಕ್ತರು, ಅವುಗಳನ್ನು ‌ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಂತರ ರವಿವಾರ ಪೇಟೆಯ ಬಾಜಿ ಮಾರ್ಕೆಟ್‌ಗೆ ಭೇಟಿ ನೀಡಿ ಅಲ್ಲಿ ಸ್ವಚ್ಛತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Previous articleಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ
Next articleಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ