ಮುಂದಿನ ಒಂದು ವಾರ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ. ಜೋರಾದ ಗಾಳಿಯ ಜೊತೆಗೆ ಮಳೆ ಸುರಿಯುತ್ತಿದೆ. ಕೆಲವು ಜಿಲ್ಲೆಗಳ ತಾಲೂಕುಗಳಲ್ಲಿ ಮಳೆಯ ಕಾರಣ ಗುರುವಾರ ಶಾಲೆಗಳಿಗೆ ರಜೆಯನ್ನು ನೀಡಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಅನ್ವಯ ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಹೇಗೆ ಸುರಿಯಲಿದೆ? ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

ಮುಂದಿನ 7 ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 4 ರಿಂದ 9ರ ತನಕ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿಯೂ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಲೆನಾಡು ಭಾಗದಲ್ಲಿಯೂ ಮುಂಗಾರು ಚುರುಕಾಗಿದ್ದು, ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಡ್ಯಾಂಗೆ ಒಳಹರಿವು 26,718 ಕ್ಯುಸೆಕ್ ಆಗಿದೆ. ಹೊರ ಹರಿವು ಸದ್ಯ 13,748 ಕ್ಯುಸೆಕ್. ಒಳಹರಿವು ಹೆಚ್ಚಾಗುತ್ತಿದ್ದು, ಗುರುವಾರದಿಂದ 20 ರಿಂದ 60 ಸಾವಿರ ಕ್ಯೂಸೆಕ್ ತನಕ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ.

ಮೈಸೂರು, ಬೆಂಗಳೂರು ಭಾಗಕ್ಕೆ ಪ್ರಮುಖ ಜಲಾಶಯವಾದ ಮಂಡ್ಯದ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬಾಗಿನ ಅರ್ಪಿಸಿದ್ದಾರೆ. ಸದ್ಯ ಡ್ಯಾಂನಲ್ಲಿ 49.38 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಹೊರ ಹರಿವು 19,621 ಕ್ಯುಸೆಕ್ ಆಗಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಈ ಬಾರಿ ಅವಧಿಗೂ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿತ್ತು. ಮೇ ಅಂತ್ಯದಲ್ಲಿಯೇ ವಿವಿಧ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿತ್ತು. ಆದ್ದರಿಂದ ರಾಜ್ಯದ ಬಹುತೇಕ ಜಲಾಶಯಗಳು ಜೂನ್ ಅಂತ್ಯದಲ್ಲಿಯೇ ಭರ್ತಿಯಾಗಿವೆ.

ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ಕೃಷಿ ಚಟುವಟಿಕೆಯೂ ಬಿರುಸಾಗಿದೆ.

ಮುಂಗಾರು ಋತು ಪೂರ್ವ ಹಂಗಾಮಿನಲ್ಲಿಯೂ ಸುರಿದ ಉತ್ತಮ ಮಳೆಯಿಂದ ಸಂತಸಗೊಂಡಿದ್ದ ರೈತರು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದರು. ಡ್ಯಾಂಗಳು ಭರ್ತಿಯಾಗುತ್ತಿದ್ದು, ಈ ಬಾರಿಯೂ ಕೃಷಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.