ಮೀಸಲಾತಿ: ಶ್ರಾವಣದಿಂದ ಮತ್ತೆ ಹೋರಾಟ

0
15

ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಅಥವಾ ರಾಜ್ಯ ಸರ್ಕಾರ ನೂತನವಾಗಿ ಸೃಷ್ಟಿಸಿರುವ 2ಡಿ ಅಡಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಶ್ರಾವಣ ಮಾಸದ ಇಷ್ಟಲಿಂಗ ಪೂಜೆಯೊಂದಿಗೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡಿದ್ದೆವು. ಆದರೆ, ಸರಕಾರ ಕೊನೆಗಳಿಗೆಯಲ್ಲಿ ನಮ್ಮ ಬೇಡಿಕೆಗೆ ಮಣಿದು ಹೊಸದಾಗಿ ೨ಡಿ ಗುಂಪು ಸೃಷ್ಟಿಸಿ ಅದರ ಅಡಿಯಲ್ಲಿ ಮೀಸಲಾತಿ ಕಲ್ಪಿಸುವುದಾಗಿ ಹೇಳಿತು. ಈಗ ಅದು ನನೆಗುದಿಗೆ ಬಿದ್ದಿರುವುದರಿಂದ ಸಮುದಾಯಕ್ಕೆ ನಿರಾಸೆಯಾಗಿದೆ. ಅದ್ದರಿಂದ, ಪಂಚಮಸಾಲಿ ಸಮುದಾಯಕ್ಕೆ ೨ಎ ಇಲ್ಲವೇ, ೨ಡಿ ಅಡಿ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ, ಶ್ರಾವಣ ಮಾಸದ ಇಷ್ಟಲಿಂಗ ಪೂಜೆಯ ಮೂಲಕ ವಿನೂತನ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಆದರೆ, ಈ ಹೋರಾಟವನ್ನು ಯಾವ ಭಾಗದಿಂದ ಆರಂಭಿಸಬೇಕೆನ್ನುವುದರ ಬಗ್ಗೆ ಇಂದು (ಆ.೧೮ರಂದು) ಮಧ್ಯಾಹ್ನ ಬೆಳಗಾವಿಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬುದರ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇವು. ಅವರು ಅವೇಶನದ ಬಳಿಕ ಕಾನೂನು ತಜ್ಞರ ಸಭೆ ಕರೆದು ಚರ್ಚಿಸಿ, ಪರಿಶೀಲಿಸುವುದಾಗಿ ಹೇಳಿದ್ದರು. ಈಗ ಅವೇಶನ ಮುಗಿದು ತಿಂಗಳು ಸಮೀಪಿಸುತ್ತಾ ಬಂದರೂ ಸಭೆ ಕರೆದಿಲ್ಲ. ಕಳೆದ ಚುನಾವಣೆಯಲ್ಲಿ ಪಂಚಮಸಾಲಿಗಳು ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ, ೨೦೨೪ರ ಲೋಕಸಭೆ ಚುನಾವಣೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ ೨ಎ ಅಥವಾ ೨ಡಿ ಅಡಿಯಲ್ಲಿ ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಬೇಕು ಹಾಗೂ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ, ಪಂಚಮಸಾಲಿ ಸಮುದಾಯ ಋಣ ತೀರಿಸಬೇಕು ಎಂದು ಆಗ್ರಹಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯನ್ನು ಎಸ್.ಎಸ್. ಜಾಮ್ದಾರ್ ವಹಿಸಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ನಾವು ಮೀಸಲಾತಿ ಕೊಡಿಸುವ ಹೋರಾಟದ ಮುಂದಾಳತ್ವ ವಹಿಸಿರುವುದರಿಂದ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ, ಸಾಮಾಜಿಕ ಸಮೀಕ್ಷೆ ವರದಿ ಅನುಷ್ಠಾನಗೊಳಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಲಿಂಗಾಯತರು-ಒಕ್ಕಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವಿನ್ನೂ ಆ ವರದಿಯನ್ನು ಓದಿಲ್ಲ. ಅದನ್ನು ಪೂರ್ಣ ಓದಿ ಯಾವುದಾದರೂ ಸಮುದಾಯಕ್ಕೆ ಅದರಿಮದ ತೊಂದರೆ ಆಗುವುದಿದ್ದರೆ, ಅದನ್ನು ಪುನರ್ ಪರಮಾರ್ಶೆಗೆ ಒಳ ಪಡಿಸುವಂತೆ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Previous articleಹುಬ್ಬಳ್ಳಿ ಡ್ರಗ್ಸ್ ಹಬ್ ಆಗೋಕೆ ಬಿಡುವುದಿಲ್ಲ
Next articleಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ