ಹುಬ್ಬಳ್ಳಿ: ಮಹದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅನುಷ್ಠಾನಕ್ಕಾಗಿ ಮಹದಾಯಿ ಪ್ರವಾಹ್(ಪ್ರಾಧಿಕಾರ) ರಚಿಸುವ ಕುರಿತು ಮಹತ್ವದ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಕ್ಕೆ ರೈತ ಸಮೂಹ ಹರ್ಷ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳಸಾ ಬಂಡೂರಿ ನದಿ ಪ್ರಾಧಿಕಾರ ರಚನೆಗೆ ನಿರ್ಧಾರ ಕೈಗೊಂಡಿರುವ ಬೆಳವಣಿಗೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಹರ್ಷಕ್ಕೆ ಕಾರಣವಾಗಿದೆ.
ಅಂತಿಮ ಹಂತದಲ್ಲಿರುವ ಮಹದಾಯಿ ನೀರಿನ ಯೋಜನೆಗೆ ಜಾರಿಗೆ ಇದೊಂದು ಮಹತ್ವದ ಘಟ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.
ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದ ನ್ಯಾಯಾಧೀಕರಣಗಳ ತೀರ್ಪುಗಳ ಅನುಷ್ಠಾನದಲ್ಲಿ ಸಂಬಂಧಿತ ರಾಜ್ಯಗಳ ನಡುವೆ ತಕಾರರು ಎದುರಾಗದಂತೆ ತಡೆಯಲು ನೀರು ನಿರ್ವಹಣಾ ಮಂಡಳಿಗಳನ್ನು ರಚಿಸಲಾಗುತ್ತದೆ. ಈಗಾಗಲೇ ರಚಿಸಲಾಗಿರುವ ಕಾವೇರಿ ನಿರ್ವಹಣಾ ಮಂಡಳಿ ಮಾದರಿಯಲ್ಲಿ ಮಹದಾಯಿ ಪ್ರವಾಹ ಪ್ರಾಧಿಕಾರ ಅಸ್ತಿತ್ವಕ್ಕೆ ಬರುತ್ತಿದೆ.
ಮಹದಾಯಿ ನದಿಯಿಂದ ೩.೯೦ ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ೧೩೦೦ ಕೋಟಿ ರೂ ಪರಿಷ್ಕೃತ ಅಂದಾಜು ವೆಚ್ಚದ ಈ ಯೋಜನೆಗೆ ಕೇಂದ್ರ ಜಲಶಕ್ತಿ ಅನುಮೋದನೆ ದೊರಕಿತ್ತು. ಇದಕ್ಕೆ ಗೋವಾ ತಕರಾರರು ಎತ್ತಿತ್ತು.
ಖಾನಾಪುರದ ಕಣಕುಂಬಿ ಬಳಿ ಮಹದಾಯಿ ನದಿಯಿಂದ ಎರಡು ಜಾಕ್‌ವೆಲ್ ಮೂಲಕ ನೀರೆತ್ತಿ ನಾಲಾ ತಿರುವು ಮಾಡಿ ನೀರು ಹರಿಸುವ ಯೋಜನೆಯಾಗಿದೆ. ೨೦೧೮ ರಲ್ಲಿ ನ್ಯಯಾಧಿಕರಣ ಮಹದಾಯಿ ನದಿ ನೀರು ಕುಡಿಯುವ ನೀರಿನ ಉದ್ದೇಶಕ್ಕಾಗಿ ೩.೯೦ ಟಿಎಂಸಿ ಹಂಚಿಕೆ ಮಾಡಿತ್ತು.