ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಲ್ಯಾಮಿಂಗ್ಟನ್ ಶಾಲೆಯಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಇವತ್ತಿನ ರಾಜಕೀಯ ವಾತಾವರಣ ನೋಡಿದರೆ ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು. ಮತದಾರರಿಗೆ ಆಮಿಷ ಒಡ್ಡಲಾಗುತ್ತದೆ ಎಂಬ ಮಾಹಿತಿ ನನ್ನ ಕಿವಿಗೆ ಬಿದ್ದಿದೆ. ಒಂದೊಂದು ಮತಕ್ಕೆ ಐದು ಸಾವಿರ ಕೊಟ್ಟಿದ್ದಾರೆಂಬ ಸುದ್ದಿ ಕೇಳಿ ಶಾಕ್ ಆಯ್ತು. ಕೆಲವು ಮತದಾರರು ಆಮಿಷಕ್ಕೆ ಒಳಗಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಈ ರೀತಿ ಆಗಬಾರದು. ಆಸೆ ಆಕಾಂಕ್ಷಿಗಳಿಗೆ ಬಲಿಯಾಗದೆ ಜನರು ಅಭಿವೃದ್ಧಿ ನೋಡಿ ಮತದಾನ ಮಾಡಬೇಕು. ಇವತ್ತಿನ ರಾಜಕಾರಣ ಕುಲಗೆಟ್ಟ ಹೋಗಿದ್ದು, ಅಭಿವೃದ್ಧಿ ಆಧಾರಿತ ರಾಜಕಾರಣ ಮೂಲೆ ಸೇರಿದೆ. ಕೇವಲ ಆರೋಪ, ಪ್ರತ್ಯಾರೋಪಗಳಿಗೆ ಪ್ರಚಾರ ಸೀಮಿತ ಆಗಿತ್ತು. ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದರು.