ಮಂಡ್ಯ ಕೇಂದ್ರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ವೆಂಕಟೇಶ್ ಅವರು ತಮ್ಮ ಅಧಿಕಾರವನ್ನು ಪುತ್ರಿ ವರ್ಷಾಗೆ ಹಸ್ತಾಂತರಿಸಿ ಗಮನ ಸೆಳೆದ ಘಟನೆ ನಡೆದಿದೆ ಇಂತಹದೊಂದು ಅಪರೂಪದ ಘಟನೆಗೆ ಮಂಡ್ಯ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.
ಇಲ್ಲಿ ಪಿಎಸ್‌ಐ ಆಗಿದ್ದ ತಂದೆಯು ತಾನು ನಿರ್ವಹಿಸುತ್ತಿದ್ದ ಹುದ್ದೆಯ ಜಾರ್ಜ್ (ಕರ್ತವ್ಯ ಹೊಣೆಗಾರಿಕೆ) ಅನ್ನು ಮಗಳಿಗೆ ನೀಡಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಬಿ.ಎಸ್.ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದರು. ಸರ್ಕಾರ ಎರಡು ದಿನದ ಹಿಂದೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ವೆಂಕಟೇಶ್ ಅವರ ಸ್ಥಳಕ್ಕೆ ವರ್ಷ ಅವರನ್ನು ನೇಮಿಸಿದೆ. ಇದರಿಂದ ಅಧಿಕಾರ ಹಸ್ತಾಂತರ ನಡೆಯಿತು.
ವೆಂಕಟೇಶ್: ನಾನು ಪಿಎಸ್‌ಐ ಆಗಿ ಕೆಲಸ ಮಾಡುತ್ತಾ ಇರುವಾಗಲೇ ಅದೇ ಠಾಣೆಗೆ ಮಗಳ ನೇಮಕವಾಗಿದೆ. ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿರುವುದು ಖುಷಿ ತಂದಿದೆ. ಪ್ರಥಮ ಪ್ರಯತ್ನದಲ್ಲೇ ವರ್ಷಾ ಪಿಎಸ್‌ಐ ಆಗಿ ಆಯ್ಕೆಯಾಗಲು ಕಠಿಣ ಪರಿಶ್ರಮ ಹಾಕಿದ್ದಾಳೆ. ಆಕೆಗೆ ಒಳಿತಾಗಲಿ ಎಂದಿದ್ದಾರೆ
ವರ್ಷಾ: ನಾನು ಅಪ್ಪನಂತೆ ಪೊಲೀಸ್ ಇಲಾಖೆ ಸೇರುವ ಆಸೆ ಹೊಂದಿದ್ದೆ. ಅದರಲ್ಲಿ ಯಶಸ್ವಿಯೂ ಆಗಿದ್ದೆ. ಈಗ ಅವರಿಂದಲೇ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವುದು ಸ್ಮರಣೀಯ ಕ್ಷಣ. ನಾನು ಪೊಲೀಸ್ ಇಲಾಖೆ ಸೇರಲು ನನ್ನ ತಂದೆಯೇ ಪ್ರೇರಣೆ. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಬಡವರು ಹಾಗೂ ಅಗತ್ಯ ಇರುವವರಿಗೆ ನ್ಯಾಯ ಕೊಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.