ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಪಿಎಚ್‌ಡಿ: ಸಿಎಂ

ಬೆಳಗಾವಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಭ್ರಷ್ಟಾಚಾರಗಳನ್ನು ಮುಚ್ಚಿಡುವುದಕ್ಕೆ ಈಗ ಪ್ರತಿಭಟನೆ ನಾಟಕ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನಾಯಕರು ಪಿಎಚ್‌ಡಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹತ್ತು ಹದಿನೈದು ಜನ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. 300 ಅಲ್ಲ, ಎಲ್ಲಾ ಕಡೆ ಪ್ರತಿಭಟನೆ ಮಾಡಿದರೂ ಜನ ಅವರತ್ತ ಹೋಗುವುದಿಲ್ಲ. ಇದೊಂಥರಾ ಫ್ಲಾಪ್ ಶೋ. ತಮ್ಮ ಅಧಿಕಾರದ ಅವಧಿಯಲ್ಲಿ ಸಂವಿಧಾನಾತ್ಮಕವಾಗಿ ರಚನೆಯಾದ ಲೋಕಾಯುಕ್ತ ಮುಚ್ಚಿ ಹಾಕಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟು ರಕ್ಷಣೆ ಕೊಟ್ಟರು. ತಾವೇ ಸ್ವಂತ ಭ್ರಷ್ಟಾಚಾರ ಮಾಡಿ ಮುಚ್ಚಿ ಹಾಕಿದ್ರೂ. ಅವರ ವಿರುದ್ಧ ಇರುವ ಎಲ್ಲಾ ಕೇಸ್ ಎಸಿಬಿಗೆ ಕೊಟ್ಟು ಮುಚ್ಚಿ ಹಾಕಿದ್ರು. ಯಾರು ಯಾರು ಕೇಸ್ ಕೊಟ್ಟಿದ್ರೂ ಅದೆಲ್ಲವನ್ನೂ ಮತ್ತೆ ಲೋಕಾಯುಕ್ತಕ್ಕೆ ಉಲ್ಲೇಖ ಮಾಡ್ತೀವಿ. ಲೋಕಾಯುಕ್ತ ತನಿಖೆ ಆಗುತ್ತೆ, ಅದರಲ್ಲಿ ಮೊದಲು ಸ್ವಚ್ಛ ಆಗಿ ಬನ್ನಿ ಎಂದು ಮಾತಿನಿಂದಲೇ ತಿವಿದರು