ಬೆಂಗಳೂರು: ರಾಜ್ಯ ರಾಜಧಾನಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ರಾಜ್ಯ ಸರ್ಕಾರವೂ ಪಣತೊಟ್ಟಿದೆ. ಈ ಕಾರಣಕ್ಕೆ ಸಭೆಗಳ ಮೇಲೆ ಸಭೆ ನಡೆಸಿ ಹಲವು ನಿರ್ಧಾರ ಕೈಗೊಳ್ತಿದೆ ರಾಜ್ಯ ಸರ್ಕಾರ. ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಪ್ರಮುಖ ಸಭೆ ನಡೆಸಿದ್ದಾರೆ. ಬೆಂಗಳೂರಿನ ವೈಭವವನ್ನು ಮರಳಿ ತರುವ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡುವುದೇ ನಮ್ಮ ಧ್ಯೇಯ ಎಂದಿದ್ದಾರೆ.
ಬೆಂಗಳೂರಿಗೆ ಹೊಸ ರೂಪ ನೀಡಿ ಸಮಗ್ರ ಅಭಿವೃದ್ಧಿ, ಬ್ರ್ಯಾಂಡ್ ಬೆಂಗಳೂರು ಬಗ್ಗೆ ಇಂದು ಬೆಂಗಳೂರಿನ 42 ಪ್ರಮುಖ ವ್ಯಕ್ತಿಗಳ ಜತೆ ಡಿಸಿಎಂ ಸಭೆ ನಡೆಸಿದರು. ಇದು ಮೊದಲ ಹಂತದ ಸಭೆ. ಈ ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆ ಬಂದಿದೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೊದಲು ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.